ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾನುವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಗ್ರೂಪ್-2ರಲ್ಲಿ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಉಳಿದ ಒಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್ , ಅಪ್ಘಾನಿಸ್ತಾನ ಹಾಗೂ ಟೀಮ್ ಇಂಡಿಯಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಗ್ರೂಪ್-2ರಲ್ಲಿ ಎಲ್ಲಾ ತಂಡಗಳು ತಲಾ 4 ಪಂದ್ಯಗಳನ್ನು ಆಡಿವೆ. ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. 4ರಲ್ಲಿ ಮೂರು ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ಭಾನುವಾರ ಅಫ್ಘಾನಿಸ್ತಾನದ ವಿರುದ್ಧ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಸೋತರೆ ಸಂಪೂರ್ಣ ಚಿತ್ರಣವೇ ಬದಲಾಗಲಿದೆ.
ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ ಆಡಿರುವ ನಾಲ್ಕು 4 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಕಂಡಿದೆ. ಆದರೂ ಕೊಹ್ಲಿ ಪಡೆಯ ರನ್’ರೇಟ್ ಉತ್ತಮವಾಗಿರುವ ಕಾರಣ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ನ್ಯೂಜಿಲೆಂಡ್ ತಂಡದೊಂದಿಗೆ 6 ಅಂಕಗಳ ಸಮಬಲ ಸಾಧಿಸಲಿದೆ. ಭಾರತ ತನ್ನ ಕೊನೇಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲುವು ಸಾಧಿಸಿದರೆ 6 ಅಂಕಗಳಿಸಲಿದ್ದು, ಭಾರಿ ಅಂತರದಲ್ಲಿ ಗೆಲುವು ಸಾಧಿಸಿದರೆ ರನ್’ರೇಟ್ ಆಧಾರದಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ.