ಪಡುಬಿದ್ರಿ: ಒಟಿಪಿ ರವಾನಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ವರದಿಯಾಗಿದೆ.
ಎರ್ಮಾಳಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್ ಚೋರನೊಬ್ಬ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದೇನೆ. ಎರ್ಮಾಳು ಕೆನರಾ ಬ್ಯಾಂಕ್ ಶಾಖೆಯ ನಿಮ್ಮ ಖಾತೆ ಸ್ತಂಭನವಾಗಿದೆ. ಸರಿಪಡಿಸಲು ಮೊಬೈಲ್ಗೆ ಬರುವ ಒಟಿಪಿ ವಿವರ ತನಗೆ ನೀಡಿ ಎಂದು ಪುಸಲಾಯಿಸಿ ವ್ಯಕ್ತಿಯ ಖಾತೆಯಿಂದ 3.24 ಲಕ್ಷ ರೂ.ಗಳನ್ನು ಲಪಟಾಯಿಸಿದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಕೆನರಾ ಬ್ಯಾಂಕ್ ನಿಂದ ಹಣ ನಗದೀಕರಣದ ಕುರಿತಾದ ಮೆಸೇಜ್ ಬಂದಾಗಲೇ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಶಾಖೆಗೆ ಆಗಮಿಸಿ ಪರಿಶೀಲಿಸಿದಾಗ ಇದು ದೃಢಪಟ್ಟಿದೆ.
ಎಚ್ಚರಿಕೆ ಅಗತ್ಯ
ಬ್ಯಾಂಕ್ನ ಯಾರೇ ಅಧಿಕಾರಿಯಾಗಲೀ, ನೌಕರರಾಗಲೀ ಗ್ರಾಹಕನಿಗೆ ಒಟಿಪಿ ರವಾನಿಸಲಾರರು. ಮೊಬೈಲ್ ಬ್ಯಾಂಕಿಂಗ್ ಕುರಿತಾಗಿ ಸೈಬರ್ ಕಳ್ಳರು ಗ್ರಾಹಕರ ಹಣ ದೋಚಲು ನಾನಾ ಬಗೆಯ ದಾರಿಗಳನ್ನು ಕಂಡುಕೊಳ್ಳುತ್ತಿದ್ದು, ಗ್ರಾಹಕರು ಈ ಕುರಿತಾಗಿ ಎಚ್ಚರಿಕೆಯಿಂದ ಇರಬೇಕಿದೆ. ಯಾವುದೇ ಕಾರಣಕ್ಕೂ ಇಂತಹ ಜಾಲಗಳಿಗೆ ಬಲಿಯಾಗಬಾರದು ಎಂದು ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.