ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.74.67ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

Prasthutha|

►ದ.ಕ.ಪ್ರಥಮ, ಉಡುಪಿ ದ್ವಿತೀಯ

- Advertisement -


ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡಾ 74.67ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಪಡೆದಿದೆ.

ರಾಜ್ಯಾದ್ಯಂತ ಒಟ್ಟು 7,02,067 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿ 74.67ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 61.22ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 75.89ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ 85.71ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

- Advertisement -

ಬೆಂಗಳೂರಿನ ಎನ್ ಎಂಕೆಆರ್ ವಿ ಕಾಲೇಜಿನ ತಬಸ್ಸುಮ್ ಶೇಖ್ ಕಲಾ ವಿಭಾಗದಲ್ಲಿ 593 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ, ಬಳ್ಳಾರಿಯ ಹಿಂದೂ ಇಂದು ಇನ್ನೋವೇಟಿವ್ ಪಿಯು ಕಾಲೇಜಿನ ಕುಷಾ ನಾಯ್ಕ್ ಜಿಎಲ್ ಅವರು 592 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅದೇ ಕಾಲೇಜಿನ ದದ್ದಿ ಕರಿಬಸಮ್ಮ, ಬಳ್ಳಾರಿಯ ಎಸ್ ಯುಜೆಎಂ ಕಾಲೇಜಿನ ಮುತ್ತೂರು ಮಲ್ಲಮ್ಮ, ಬೆಳಗಾವಿಯ ಲಿಂಗರಾಜ ಪಿಯು ಕಾಲೇಜಿನ ಪ್ರಿಯಾಂಕ ಕುಲಕರ್ಣಿ, ವಿಜಯಪುರದ ಎಸ್ ಕೆ ಪಿಯು ಕಾಲೇಜಿನ ರಾಹುಲ್ 592 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅನನ್ಯ ಕೆ.ಎ. ಅವರು 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದ ವಿಕಾಸ್ ಕಾಲೇಜಿನ ಅನ್ವಿತಾ ಡಿಎನ್, ಬೆಂಗಳೂರಿನ ಟ್ರಾನ್ಸೆಂಡ್ ಪಿಯು ಕಾಲೇಜಿನ ಛಾಯಾ ರವಿಕುಮಾರ್ ಹಾಗೂ ವರ್ಷಾ, ಮೂಡಬಿದಿರೆ ಎಕ್ಸ ಲೆಂಟ್ ಕಾಲೇಜಿನ ಖುಷಿ, ಮಂಗಳೂರಿನ ವಿಕಾಸ್ ಪಿಯು ಕಾಲೇಜಿನ ಸ್ವಾತಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಧನ್ಯಶ್ರೀ ಹಾಗೂ ಘಾನ, ಮೂಡಬಿದಿರೆ ಆಳ್ವಾಸ್ ಪಿಯು ಕಾಲೇಜಿನ ದಿಶಾ ರಾವ್, ಬೆಂಗಳೂರಿನ ಎಎಸ್ ಸಿ ಪಿಯು ಕಾಲೇಜಿನ ಇಂಚರಾ  ಅವರು 596 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೋಲಾರ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ಹಾಗೂ ಬೆಂಗಳೂರಿನ ಆರ್ ವಿ ಕಾಲೇಜಿನ ಸುರಭಿ ಅವರು 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಆರ್ ವಿ ಪಿಯು ಕಾಲೇಜಿನ ಕೆ.ಜಯಷಿಕಾ, ಉಡುಪಿ ಮಹಾತ್ಮ ಗಾಂಧಿ ಪಿಯು ಕಾಲೇಜಿನ ಸತ್ವಿಕ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಿಸ್ವಿತಾ ಅವರು 595 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪರಿಶಿಷ್ಟ ಜಾತಿಯ ಶೇಕಡಾ 64.44, ಪರಿಶಿಷ್ಟ ಪಂಗಡದ 65.62, ಸಿ-ಎ ವಿಭಾಗದ 50.37, 2-ಎ ವಿಭಾಗದ 77.89, 2-ಬಿ ವಿಭಾಗದ 72.42, 3-ಎ ವಿಭಾಗದ 82.40, 3-ಬಿ ವಿಭಾಗದ 79.50ರಷ್ಟು ಹಾಗೂ ಸಾಮಾನ್ಯ ವಿಭಾಗದ 79.95ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕನ್ನಡ ವಿಭಾಗದ 1,83,221 ವಿದ್ಯಾರ್ಥಿಗಳು ತೇರ್ಗಡೆಯಾಗಿ 63.68ರಷ್ಟು ಫಲಿತಾಂಶ ಬಂದಿದ್ದರೆ, ಇಂಗ್ಲೀಷ್ ವಿಭಾಗದಲ್ಲಿ 82.30ರಷ್ಟು ಫಲಿತಾಂಶ ಬಂದಿದೆ.

1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಅಂದರೆ ಶೇಕಡಾ 85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. 2,47,315 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 90,014 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 77,371 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಈ ಬಾರಿಯೂ ಶೇಕಡಾ 95.33ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ಬಾರಿ ಈ ಜಿಲ್ಲೆ 88.02 ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿತ್ತು.

ಈ ಬಾರಿ ಉಡುಪಿ 95.24, ಕೊಡಗು 90.55 ಫಲಿತಾಂಶ ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿದೆ. ಯಾದಗಿರಿ ಜಿಲ್ಲೆ 62.98 ಫಲಿತಾಂಶ ಪಡೆದು ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

Join Whatsapp