ಬೆಂಗಳೂರು: ಲಿಂಗಾಯಿತ ಪಂಚಮಸಾಲಿಗೆ 2ಎಗೆ ಮೀಸಲಾತಿ ನೀಡದಿದ್ದರೆ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದ ಜಯಮೃತ್ಯುಂಜಯ ಸ್ವಾಮೀಜಿ ಬೆಂಗಳೂರಿನಲ್ಲಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಸಚಿವ ಸಿಸಿ ಪಾಟೀಲ್, ವಿಜಯಾನಂದ ಕಾಶಪ್ಪನವರ್ ಸಹ ಇದ್ದರು.
ಭಾರತೀಯ ವಿದ್ಯಾಭವನದಲ್ಲಿ ಪಂಚಮಸಾಲಿ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಸಿಸಿ ಪಾಟೀಲ್ ಸರ್ಕಾರದ ನಿರ್ಧಾರವನ್ನು ಮಂಡಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ 2 ಎ ಮೀಸಲಾತಿಯ ವಿಚಾರವಾಗಿ ಸಿಎಂ ಜೊತೆ ಸುದೀರ್ಘ ವಾಗಿ ಚರ್ಚೆ ನಡೆದಿದೆ. ಈಗ ಭಾರತೀಯ ವಿದ್ಯಾಭವನದಲ್ಲಿ ಸಭೆ ಬಳಿಕ ನಮ್ಮ ನಿರ್ಧಾರ ತಿಳಿಸುತ್ತೇವೆ. ಸರ್ಕಾರದ ನಿರ್ಧಾರ ನೋಡಿಕೊಂಡು ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.
ಹೋರಾಟ ಕೈ ಬಿಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಮೀಸಲಾತಿ ಸಂಬಂಧವೂ ಕೆಲ ವಿಷಯಗಳನ್ನು ಹೇಳಿದ್ದಾರೆ. ಅಧಿವೇಶನದಲ್ಲಿ ನಮ್ಮ ಜನಪ್ರತಿನಿಧಿಗಳು ಏನು ಹೇಳುತ್ತಾರೆ ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೂ ಚರ್ಚೆ ಮಾಡಬೇಕು. ಆ ಸಭೆಯಲ್ಲಿ ಸರ್ಕಾರದ ಉತ್ತರವನ್ನು ಸಚಿವ ಸಿಸಿ ಪಾಟೀಲ್ ಪ್ರಕಟ ಮಾಡಲಿದ್ದಾರೆ. ಸರ್ಕಾರದ ನಿರ್ಧಾರ ನೋಡಿಕೊಂಡು ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಜಯಮತೃಂಜಯ ಸ್ವಾಮೀಜಿ ಹೇಳಿದರು.
ಸಚಿವ ಸಿ ಸಿ ಪಾಟೀಲ್ ಮಾತನಾಡಿ, ಸಿಎಂ ಸಭೆಯಲ್ಲಿ ಸತ್ಯಾಗ್ರಹ ಮಾಡುವುದು ಬೇಡ ಎಂದು ಮನವಿ ಮಾಡಲಾಗಿದೆ. ಸರ್ಕಾರದ ನಿರ್ಧಾರವನ್ನು ಪಂಚಮಸಾಲಿಗಳ ಜಂಟಿ ಅಧಿವೇಶನದಲ್ಲಿ ಪ್ರಕಟಿಸುತ್ತೇವೆ. ಇಲ್ಲಿ ಸಿಎಂ ಸಭೆಯಲ್ಲಿ ನಡೆದಿದ್ದನ್ನು ನಾನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.