ಅಥೆನ್ಸ್: ಉತ್ತರ ಗ್ರೀಸ್’ನಲ್ಲಿ 350 ಜನರಿದ್ದ ಪ್ರಯಾಣಿಕರ ರೈಲೊಂದು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 29 ಜನರು ಸಾವಿಗೀಡಾಗಿ, 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೀಸ್ ರಾಜಧಾನಿ ಅಥೆನ್ಸ್’ನಿಂದ 380 ಕಿಲೋಮೀಟರ್ ದೂರದ ಟೆಂಪ್ ಎಂಬಲ್ಲಿ ನಡೆದ ಈ ಅಪಘಾತದಲ್ಲಿ ಹಲವು ಬೋಗಿಗಳು ಹಳಿ ತಪ್ಪಿದವು ಮತ್ತು ಮೂರು ಬೋಗಿಗಳು ಬೆಂಕಿಗಾಹುತಿಯಾದವು. ಗಾಯಗೊಂಡವರಲ್ಲಿ 25 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹತ್ತಿರದ ನಗರ ಲಾರಿಸ್ಸಾದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
“ಎರಡು ರೈಲುಗಳ ನಡುವೆ ಡಿಕ್ಕಿ ಮತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದ ಸರಕುಗಳ ಕಾರಣದಿಂದಾಗಿ ಎಲ್ಲರನ್ನು ಎಬ್ಬಿಸಿ ಸಾಗಿಸುವ ಕೆಲಸ ತುಂಬ ಕಷ್ಟದ್ದಾಯಿತು” ಎಂದು ಅಗ್ನಿ ಶಾಮಕ ದಳದ ವಕ್ತಾರ ವಾಸಿಲಿಸ್ ವರ್ತಕೋಯಿನ್ನೀಸ್ ಹೇಳಿದರು.
ಒಂದು ಡಜನ್’ಗೂ ಹೆಚ್ಚು ಆಂಬುಲೆನ್ಸ್’ಗಳು ಓಡಾಡಿದವು. ಹತ್ತಿರದ ಎಲ್ಲ ಆಸ್ಪತ್ರೆಗಳಿಗೂ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಸಜ್ಜಾಗಿರುವಂತೆ ತಿಳಿಸಲಾಗಿದೆ.
ಮಂಜು ಜೊತೆಗೆ ಭಾರೀ ಹೊಗೆ ತುಂಬಿಕೊಂಡದ್ದರಿಂದ ರಕ್ಷಣಾ ಸೇವೆಯವರು ಬುರುಡೆಗೆ ತಲೆದೀಪ ಕಟ್ಟಿಕೊಂಡು ಕೆಲಸ ಮಾಡಿದರು. ಸಿಕ್ಕಿ ಬಿದ್ದ ಜನರನ್ನು ರಕ್ಷಿಸಲು ಅವರು ಮುರಿದ, ಮುರುಟಿದ ರೈಲು ಲೋಹಗಳನ್ನು ಎಚ್ಚರಿಕೆಯಿಂದ ಎಳೆದು ದುಡಿಯಬೇಕಾಯಿತು.
ಗಾಯಗೊಂಡವರನ್ನು ಆಗಿಂದಾಗ್ಗೆ ಆಸ್ಪತ್ರೆಗಳಿಗೆ ಸಾಗಿಸಲಾಯಿತು.