ಎಸ್ಸಿ-ಎಸ್ಟಿ ಸಮುದಾಯದ ಕಲ್ಯಾಣಕ್ಕಾಗಿ 28 ಸಾವಿರ ಕೋಟಿ ರೂ.: ಸಿ.ಎಂ ಬೊಮ್ಮಾಯಿ

Prasthutha|

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಕಲ್ಯಾಣಕ್ಕಾಗಿ ಎಸ್ ಸಿಪಿ, ಟಿಎಸ್ಪಿಯ 28 ಸಾವಿರ ಕೋಟಿ ರೂ. ಅನುದಾನವನ್ನು, ಈ ವರ್ಷ ಬಳಕೆ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಕಲ್ಯಾಣಕ್ಕಾಗಿ ಎಸ್ಸಿಪಿ, ಟಿಎಸ್ಪಿಯ 28 ಸಾವಿರ ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಸಮಾಜಕಲ್ಯಾಣ ಇಲಾಖೆಗೆ 500 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗುವುದು. ಕೃಷಿ ಇಲಾಖೆಗೆ 1,061 ಕೋಟಿ, ತೋಟಗಾರಿಕೆ ಇಲಾಖೆಗೆ 187 ಕೋಟಿ ರೂ., ಆರೋಗ್ಯ ಇಲಾಖೆಗೆ 1,300 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬಸ್ ಪಾಸ್ ಉಚಿತವಾಗಿ ನೀಡಲು, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಜ್ಯದಲ್ಲಿ ಪ್ರವೇಶ ಮಾಡಿದ ತಾಣಗಳ ಅಭಿವೃದ್ಧಿಗೆ 20 ಕೋಟಿ ರೂ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.



Join Whatsapp