ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್‌: ಶನಿವಾರ 24 ಸಚಿವರ ಪ್ರಮಾಣವಚನ

Prasthutha|

ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಸರ್ಕಸ್‌ ದೆಹಲಿಯಲ್ಲಿ ಬಹುತೇಕ ಅಂತ್ಯ ಕಂಡಿದ್ದು, ಮೇ 27ರ ಶನಿವಾರ ಬೆಂಗಳೂರಿನಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ಸಚಿವರಾಗಬಹುದಾದ ಹಲವರ ಹೆಸರು ಚರ್ಚೆಗೆ ಬಂದಿವೆ. ಇದುವರೆಗಿನ ಮಾತುಕತೆಯಲ್ಲಿ 18 ಸಚಿವರ ಹೆಸರು ಫೈನಲ್‌ ಆಗಿದೆ. ಇನ್ನುಳಿದವರ ಹೆಸರು ಸದ್ಯದಲ್ಲೆ ಫೈನಲ್‌ ಆಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

- Advertisement -

ಸದ್ಯ, ನೂತನ ಸಚಿವರ ಪ್ರಮಾಣವಚನ ಶನಿವಾರ ನಡೆಯಲಿದ್ದು, ಸಚಿವರ ಪಟ್ಟಿಯೂ ಅಂತಿಮಗೊಂಡಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಈ ನಡುವೆ ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ.

ಹೆಚ್.ಕೆ.ಪಾಟೀಲ್, ಮಂಕಾಳ ವೈದ್ಯ, ಶಿವಾನಂದ ಪಾಟೀಲ್, ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಕೆ.ವೆಂಕಟೇಶ್, ಮಧು ಬಂಗಾರಪ್ಪ, ಸಂತೋಷ್ ಲಾಡ್, ವಿನಯ್ ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಇನ್ನು, ವಿಧಾನಸಭೆ ಉಪಸಭಾಪತಿ ಸ್ಥಾನ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.


ಹಿರಿಯ ಶಾಸಕರಾದ ಆರ್ವಿ ದೇಶಪಾಂಡೆ ಹಾಗೂ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಬಿ.ಕೆ.ಹರಿಪ್ರಸಾದ್ ಬದಲು ಎಂಎಲ್ಸಿ ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಹಿರಿಯರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಬಂದಿಲ್ಲ.

ಆರ್.ವಿ.ದೇಶಪಾಂಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿಕೆ ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಒಂದೇ ಸಮುದಾಯದ ಮಧು, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ಅವರು ಅಸಮ್ಮತಿ ಸೂಚಿಸಿದ್ದಾರೆ. ಸದ್ಯ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಒಲಿದುಬಂದಿದ್ದು, ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

- Advertisement -