ದೆಹಲಿ ಗಲಭೆಯ ವೇಳೆ ವಂದೇ ಮಾತರಂ ಹೇಳುವಂತೆ ಥಳಿಸಿ ಕೊಲೆ: ಆರೋಪಿ ಪೊಲೀಸ್ ಸಿಬ್ಬಂದಿಯ ಪತ್ತೆಗೆ 1 ಲಕ್ಷ ರೂ.ಬಹುಮಾನ ಘೋಷಣೆ

Prasthutha|

►250 ಪೊಲೀಸರನ್ನು ವಿಚಾರಣೆ ನಡೆಸಿರುವ ದೆಹಲಿ ಪೊಲೀಸ್

- Advertisement -

ನವದೆಹಲಿ: 2020ರ ಈಶಾನ್ಯ ದಿಲ್ಲಿ ಗಲಭೆಯ ಸಂದರ್ಭದಲ್ಲಿ 23ರ ಹರೆಯದ ಫೈಝಾನ್ ರಕ್ತ ಸೋರುತ್ತ ಬಿದ್ದಿದ್ದರೂ, ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಆತನನ್ನು ಸುತ್ತುವರಿದು ವಂದೇ ಮಾತರಂ ಹಾಡಲು ಒತ್ತಾಯಿಸುತ್ತಿದ್ದ ವೀಡಿಯೋ ಕ್ಲಿಪ್ ವೈರಲ್ ಆಗಿತ್ತು.ಘಟನೆ ನಡೆದು ಎರಡು ವರ್ಷಗಳಾದರೂ ವೀಡಿಯೋದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಬಂಧನವಾಗಿಲ್ಲ. ಮಾತ್ರವಲ್ಲ ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಹಿಡಿಯಲಾಗದೆ ಈಗ ದಿಲ್ಲಿ ಪೊಲೀಸರು ಆ ಆರೋಪಿಯನ್ನು ಗುರುತಿಸುವವರಿಗೆ ರೂ. 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.


ಪೊಲೀಸ್ ಠಾಣೆಯಿಂದ ಬಿಡುಗಡೆಯಾಗಿ ಎಲ್ಲ ರಕ್ತ ಬಸಿದ ಮೇಲೆ ಆಸ್ಪತ್ರೆಗೆ ಸೇರಿಸಲಾದ ಫೈಝಾನ್ 2020ರ ಫೆಬ್ರವರಿ 26ರಂದು ಅಸುನೀಗಿದ್ದರು. ಓರ್ವ ಪೊಲೀಸ್ ಮತ್ತು ಇತರ ನಾಲ್ವರು ಈಶಾನ್ಯ ದಿಲ್ಲಿ ಗಲಭೆ ಸಂದರ್ಭದಲ್ಲಿ ಫೈಝಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ದೇಹದಿಂದ ರಕ್ತ ಹರಿಯುತ್ತಿದ್ದರೂ ಅವರಿಗೆ ಹಲ್ಲೆ ನಡೆಸಿ ಬಲವಂತವಾಗಿ ವಂದೇ ಮಾತರಂ ಹಾಡಲು ಒತ್ತಾಯಿಸುತ್ತಿದ್ದರು. ಈ ವೀಡಿಯೋ ವೈರಲ್ ಆಗಿತ್ತು.
ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಪತ್ತೆ ಮಾಡಲು 250 ಪೊಲೀಸರನ್ನು ವಿಚಾರಣೆ ನಡೆಸಲಾಗಿತ್ತು. ಆ ಗಲಭೆ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಪಟ್ಟಿ ಪರಿಶೀಲಿಸಲಾಗಿತ್ತು. ಆದರೆ ಆರೋಪಿ ಪೊಲೀಸ್ ಪತ್ತೆಯಾಗಿಲ್ಲ ಎನ್ನಲಾಗಿದೆ.

- Advertisement -


“ಈ ಎಲ್ಲ ತನಿಖೆಯ ಬಳಿಕ ದಿಲ್ಲಿ ಶಸಸ್ತ್ರ ಪೊಲೀಸ್ ಪಡೆಯ ಹೆಡ್ ಕಾನ್ ಸ್ಟೇಬಲ್ ಒಬ್ಬರನ್ನು ಆರೋಪಿ ಎನ್ನಲಾಯಿತು. ಆದರೆ ಅವರು ಆರೋಪವನ್ನು ನಿರಾಕರಿಸಿದರು. ಆತನ ಪಾಲಿಗ್ರಾಫ್ ಪರೀಕ್ಷೆ ಕೂಡ ನಡೆಸಿದಾಗ ಅದು ಸರಿ ಹೊಂದಲಿಲ್ಲ. ಕೋರ್ಟ್ ಪಾಲಿಗ್ರಾಫ್ ಮಾನ್ಯ ಮಾಡಲಿಲ್ಲ. ಅದಾದ ಬಳಿಕ ಪೊಲೀಸರು ರೋಹಿನಿಯಲ್ಲಿರುವ ಫೊರೆನ್ಸಿಕ್ ಪ್ರಯೋಗಾಲಯಕ್ಕೆ ಕ್ಲಿಪ್ ನಲ್ಲಿನ ಆ ಪೊಲೀಸ್ ಸಿಬ್ಬಂದಿಯ ಧ್ವನಿವನ್ನು ಗುರುತಿಸಲು ಕಳುಹಿಸಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ದಿಲ್ಲಿ ಗಲಭೆ ಸಂಬಂಧ ಪರಿಹಾರ ಕಾಣದ ಎಲ್ಲ ಪ್ರಕರಣಗಳನ್ನು ಹೊಸ ತನಿಖಾಧಿಕಾರಿಗಳು ಇಲ್ಲವೇ ತನಿಖಾ ತಂಡಕ್ಕೆ ವಹಿಸಿಕೊಡಲು ಹಿರಿಯ ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಹೊಸ ತನಿಖಾಧಿಕಾರಿಗಳು ಹೊಸ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಹರಿಸುವರು ಎಂಬುದು ಮೇಲಧಿಕಾರಿಗಳ ನಿರೀಕ್ಷೆ.


ಅದರಂತೆ ಫೈಝಾನ್ ಪ್ರಕರಣದಲ್ಲಿನ ತನಿಖಾಧಿಕಾರಿಯನ್ನೂ ಬದಲಿಸಲಾಗಿದೆ. ಅಲ್ಲದೆ ಹೊಸ ತನಿಖಾಧಿಕಾರಿಗೆ ನಗದು ಬಹುಮಾನ ಘೋಷಿಸುವಂತೆಯೂ ಹೇಳಲಾಗಿದೆ.
“ಹೊಸ ತನಿಖಾಧಿಕಾರಿಯು ಮತ್ತೆ ಪೊಲೀಸ್ ಸಿಬ್ಬಂದಿಯನ್ನೆಲ್ಲ ವಿಚಾರಿಸುತ್ತಲಿದ್ದಾರೆ. ಈಗಾಗಲೇ 95 ಪೊಲೀಸ್ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ” ಎಂದೂ ತನಿಖಾ ಮೂಲಗಳು ಹೇಳಿವೆ.



Join Whatsapp