ನಿದ್ದೆಯಲ್ಲಿದ್ದ 21 ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಎಸಿಬಿ: ರಾಜ್ಯದ 80 ಕಡೆಗಳಲ್ಲಿ ರೈಡ್

Prasthutha|

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ 21 ಮಂದಿ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಕೆಡವಿ ಹಣ ಚಿನ್ನ ಸೇರಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

- Advertisement -

ಬೆಂಗಳೂರು, ಧಾರವಾಡ, ಹಾವೇರಿ ಶಿವಮೊಗ್ಗ ಸೇರಿ ರಾಜ್ಯಾದ 80 ಕಡೆಗಳಲ್ಲಿ ಏಕಕಾಲದಲ್ಲಿ  300 ಮಂದಿ ಎಸಿಬಿ  ಅಧಿಕಾರಿಗಳ ತಂಡವು  ದಾಳಿ ನಡೆಸಿ 21 ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

ನೀರಾವರಿ, ಲೋಕೋಪಯೋಗಿ, ಸಾರಿಗೆ ಸೇರಿದಂತೆ ವಿವಿಧ  ಇಲಾಖೆಗಳ ಇಂಜಿನಿಯರ್ ಗಳು ಒಳಗೊಂಡ 21 ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದ ನಡೆದಿರುವ ದಾಳಿಯು ಸಂಜೆವರೆಗೆ ಮುಂದುವರೆದಿದೆ.

- Advertisement -

ನಗರದ  ಜೆಪಿ ನಗರ, ಬಸವನಗುಡಿ, ಚಂದ್ರಾಲೇಔಟ್, ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ನಗದು, ಚಿನ್ನ, ಐಷಾರಾಮಿ ವಸ್ತುಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪಾಸ್ತಿ ಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬೆಳಗಾವಿಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಭೀಮರಾವ್‌ ವೈ. ಪವಾರ್‌, ಸಣ್ಣ ನೀರಾವರಿ ಇಲಾಖೆಯ ಉಡುಪಿ ವಿಭಾಗದ ಸಹಾಯಕ ಎಂಜಿನಿಯರ್‌ ಹರೀಶ್‌, ಹಾಸನ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಕೃಷ್ಣ ಎಚ್.ವಿ., ಕಾರವಾರದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ರಾಜೀವ್‌ ಪುರಸಯ್ಯ ನಾಯಕ್‌, ಪೊನ್ನಂಪೇಟೆಯ ಜಿಲ್ಲಾ ಪಂಚಾಯತ್‌ ವಿಭಾಗದ ಕಿರಿಯ ಎಂಜಿನಿಯರ್‌ ಬಿ.ಆರ್‌. ಬೋಪಯ್ಯ, ಬೆಳಗಾವಿಯ ಜಿಲ್ಲಾ ನೋಂದಣಾಧಿಕಾರಿ ಮಧುಸೂದನ್‌, ಸಣ್ಣ ನೀರಾವರಿ ಇಲಾಖೆಯ ಹೂವಿನಹಡಗಲಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಪರಮೇಶ್ವರಪ್ಪ ಮೇಲೆ  ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.

ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಎನ್‌. ಪಡಸಾಲಿ, ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಪ್ಪ ನಾಗಪ್ಪ ಗೋಗಿ, ಗದಗ ಜಿಲ್ಲೆಯಲ್ಲಿನ ಪಂಚಾಯಿತಿ ಕಾರ್ಯದರ್ಶಿ ಪ್ರದೀಪ್‌ ಎಸ್.‌ ಆಲೂರು, ಬೆಂಗಳೂರಿನ ಉಪ ಮುಖ್ಯ ವಿದ್ಯುತ್‌ ನಿರೀಕ್ಷಕ ತಿಪ್ಪಣ್ಣ ಪಿ. ಸಿರಸಗಿ, ಬೀದರ್‌ ನ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ನಿಯಂತ್ರಕ ಮೃತ್ಯುಂಜ ಚನ್ನಬಸಯ್ಯ ತಿರಣಿ ಮನೆ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಜಲ ಸಂಪನ್ಮೂಲ ಇಲಾಖೆಯ ಚಿಕ್ಕಬಳ್ಳಾಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್‌ ಕುಮಾರ್‌, ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್‌, ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮಂಜುನಾಥ್‌ ಜಿ., ಬಿಡಿಎ ಸಿ ದರ್ಜೆ ನೌಕರ ಶಿವಲಿಂಗಯ್ಯ, ಕೊಪ್ಪಳದ ಪೊಲೀಸ್‌ ಇನ್‌ಸ್ಪೆಕ್ಟರ್‌ ಉದಯ ರವಿ, ಕಡೂರು ಪುರಸಭೆಯ ನಿರ್ವಾಹಕ ಬಿ.ಜಿ. ತಿಮ್ಮಯ್ಯ, ರಾಣೆಬೆನ್ನೂರಿನ ನಗರ ಯೋಜನಾ ಕಚೇರಿಯ ಚಂದ್ರಪ್ಪ ಸಿ. ಹೊಲೇಕರ್‌ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನಿವೃತ್ತ ಕುಲಸಚಿವ ಜನಾರ್ದನ್‌ ಮೇಲೆ ಎಸಿಬಿ ದಾಳಿ ನಡೆಸಿದೆ.

ಬಾಗಲಕೋಟೆಯ ಶಂಕರ್ ಗೋಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.  ಶಂಕರ್ ಗೋಗಿ ಹಾಗೂ ಆಪ್ತರ ಮನೆಗಳು ಸೇರಿ ಜಿಲ್ಲೆಯ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

ನಿವೃತ್ತಿ ಅಂತಿನಲ್ಲಿದ್ದ ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ.ವೈ ಪವಾರ್ ಮನೆ, ಕಚೇರಿ ಸೇರಿ ಒಟ್ಟು ‌ಐದು ಕಡೆ ಎಸಿಬಿ ದಾಳಿ ನಡೆಸಲಾಗಿದೆ. ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಮನೆ, ಸರ್ಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೇ ನಿಪ್ಪಾಣಿಯಲ್ಲಿರುವ ಮನೆ ಹಾಗೂ ಬೋರಗಾಂವದಲ್ಲಿರುವ ಕಾರ್ಖಾನೆ ಮೇಲೂ ಪ್ರತ್ಯೇಕ ತಂಡಗಳಿಂದ ದಾಳಿ‌ ಮಾಡಲಾಗಿದ್ದು, ಪವಾರ್ ಜೂ. 30 ರಂದು ಸೇವಾ ನಿವೃತ್ತಿ ಹೊಂದಲಿದ್ದರು.

ಹಾಸನದಲ್ಲಿ ದಾಳಿ:

ಹಾಸನದ ಎಇಇ ರಾಮಕೃಷ್ಣಗೆ ಸೇರಿದೆ ಮನೆ, ಕಚೇರಿ ಹಾಸನದ ವಿದ್ಯಾನಗರದಲ್ಲಿರುವ ನಿವಾಸ ಕಚೇರಿ ಸೇರಿ ಮೂರು ಕಡೆ  ದಾಳಿ ನಡೆದಿದೆ. ರಾಮಕೃಷ್ಣ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಬೀದರ್ ಸಿಡಿಪಿಓ ತಿಪ್ಪಣ್ಣ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ತಿಪ್ಪಣ್ಣ ಕಾರ್ಯನಿರ್ವಹಿಸುವ ಬೀದರ್ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ, ದಾಖಲೆ‌ಗಳ ಪರಿಶೀಲನೆ ನಡೆಸುತ್ತಿದ್ದಾರೆ.

ನಿವೃತ್ತ ರಿಜಿಸ್ಟರ್ ಗೆ ಶಾಕ್: ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ವಿಭಾಗದ ರಿಜಿಸ್ಟರ್ ಆಗಿ ನಿವೃತ್ತಿ ಹೊಂದಿದ್ದ ಜನಾರ್ದನ್ ಹಾಗೂ ಅವರ ಆಪ್ತರ ಮನೆ ಮೇಲೂ ದಾಳಿ ನಡೆದಿದ್ದು, ಚಂದ್ರಲೇಔಟ್‍ ನಲ್ಲಿ ವಾಸಿಸುತ್ತಿದ್ದಾರೆ.

ಗಂಗಾವತಿ – ಗ್ರಾಮೀಣ ಠಾಣೆಯ ಹಿಂದಿನ ಸಿಪಿಐ ಆಗಿದ್ದ ಪೊಲೀಸ್ ಅಧಿಕಾರಿ ಉದಯರವಿ ಅವರ ನಿವಾಸದ ಮೇಲೂ ದಾಳಿಯಾಗಿದೆ. ದಾಖಲಾದ ದೂರಿನನ್ವಯ ವಡ್ಡರಹಟ್ಟಿ  ಹೊರವಲಯದ ಪೊಲೀಸ್ ಅಧಿಕಾರಿಯ ಮನೆಯ ಮೇಲೆ ಎಸಿಬಿ ಡಿವೈಎಸ್ಪಿ ನೇತೃತ್ವದಲ್ಲಿ ಐದು ಜನರ ತಂಡ ದಾಳಿ ಮಾಡಿದೆ.

ಗ್ರಾಮೀಣ ಠಾಣೆಯಲ್ಲಿ ಸಿಪಿಐ ಆಗಿದ್ದ ವೇಳೆ ವಿವಾದಗಳಿಗೆ ಸಿಲುಕಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದರೂ, ವೈಯಕ್ತಿಕ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿಯಲ್ಲಿ ದಾಳಿ:

ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಅಭಿಯಂತರ ಚಂದ್ರಪ್ಪ ಓಲೇಕಾರ ಮನೆ, ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ರಾಣೆಬೆನ್ನೂರಿನ ಸಿದ್ದಾರೂಢನಗರದಲ್ಲಿರುವ ನಿವಾಸ, ರಾಣೆಬೆನ್ನೂರು ನಗರದ ಮಾಗೋಡ ರಸ್ತೆಯಲ್ಲಿರುವ ಯುಟಿಪಿ ಕಚೇರಿ ಹಾಗೂ ಜಿಲ್ಲೆಯ ಬ್ಯಾಡಗಿ ತಾಲೂಕಿನ ಆಣೂರು ಗ್ರಾಮದ ನಿವಾಸದ ಮೇಲೆ ದಾಳಿ ಎಸಿಬಿ ದಾಳಿ ಮಾಡಿದೆ. ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ವಿಜಯನಗರದಲ್ಲಿ ದಾಳಿ: ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಕೂಡ್ಲಿಗಿಯ ಸಣ್ಣ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ಮಾಡುತ್ತಿರುವ ಪರಮೇಶ್ವರಪ್ಪಗೆ ಸೇರಿದ ಹಗರಿಬೊಮ್ಮನಹಳ್ಳಿಯ ವಾಸದ ಮನೆ, ಚಿತ್ರದುರ್ಗದ ವಿದ್ಯಾನಗರ ಬಡಾವಣೆಯಲ್ಲಿರುವ ಸ್ವಂತ ಮನೆ ಹಾಗೂ ಕಚೇರಿ ಮೇಲೆ ಎಸಿಬಿಯ 3 ತಂಡಗಳು ರೇಡ್ ಮಾಡಿವೆ.

ಶಿವಮೊಗ್ಗದಲ್ಲಿ ದಾಳಿ:

ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ತೀರ್ಥಪ್ಪನವರ ಶಿವಮೊಗ್ಗ ಮನೆ, ಅವರ ಬೆಂಗಳೂರಿನ ಕಚೇರಿ ಹಾಗೂ ಬೆಂಗಳೂರಿನ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದಾವಣಗೆರೆ ಎಸಿಬಿ ಎಸ್ಪಿ ನೇತೃತ್ವದಲ್ಲಿ ಶಿವಮೊಗ್ಗ ಡಿವೈಎಸ್ಪಿ ಹಾಗೂ ಇನ್ಸ್​ಪೆಕ್ಟರ್​ಗಳು ಹಾಗೂ ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ರಾಜೀವ್ ನಾಯಕ್ ಗೆ ಶಾಕ್ :

ಕಾರವಾರದಲ್ಲಿರುವ ಕುಮಟಾ ಮೂಲದ ಪಿಡಬ್ಲುಡಿ ಇಂಜಿನಿಯರ್ ರಾಜೀವ್ ನಾಯ್ಕ ಹಾಗೂ ಜಿಲ್ಲಾ ನೊಂದಣಾಧಿಕಾರಿ ಶ್ರೀಧರ್ ಎಸಿಬಿ ದಾಳಿಗೆ ಒಳಗಾಗಿದ್ದಾರೆ. ಕಾರವಾರ ನಗರದ ಎಂ.ಜಿ ರಸ್ತೆಯಲ್ಲಿರುವ ಬೃಂದಾವನ ಅಪಾರ್ಟ್​ಮೆಂಟ್, ಹಬ್ಬುವಾಡದ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಕಾರವಾರ ಎಸಿಬಿ ಡಿವೈಎಸ್​​ಪಿ ಪ್ರಕಾಶ್ ನೇತೃತ್ವದ ತಂಡ ಹಾಗೂ ಹುಬ್ಬಳ್ಳಿಯ ಎಸಿಬಿ ಅಧಿಕಾರಿಗಳ ಎರಡು ಪ್ರತ್ಯೇಕ ತಂಡಗಳು ದಾಳಿ ನಡೆಸಿವೆ ಎಂದರು.



Join Whatsapp