ನವದೆಹಲಿ: 2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ, ಪಾಕಿಸ್ತಾನಕ್ಕೆ ತೆರಳುವ ಕುರಿತ ಎದ್ದಿದ್ದ ಊಹಾಪೋಹಕ್ಕೆ ತೆರೆಬಿದ್ದಿದೆ.
2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ. ಪೂರ್ವ ನಿಗದಿಯಂತೆ ಟೂರ್ನಿಯು, ಜುಲೈ- ಆಗಸ್ಟ್ ತಿಂಗಳಿನಲ್ಲಿ ಏಕದಿನ ಮಾದರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು.
ಮುಂಬೈನಲ್ಲಿ ನಡೆದ 91ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಮಾತನಾಡಿದ ಶಾ, ʻ ಈ ಹಿಂದೆ ಪಾಕಿಸ್ತಾನವು ಭಾರತದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿತ್ತು. ಹೀಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. 2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು. ಇದು ನನ್ನ ನಿರ್ಧಾರʼ ಎಂದು ಜಯ್ ಶಾ ಹೇಳಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಆಡಳಿತ ಮಂಡಳಿಯ ಸದಸ್ಯರಿಗೆ ಪರಿಸ್ಥಿತಿಯ ಕುರಿತು ವಿವರಿಸಲಾಗಿದೆ. ಸರ್ಕಾರದ ಸಲಹೆಯ ಆಧಾರದ ಮೇರೆಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ನಾವು ಅದನ್ನು ಪಾಲಿಸುತ್ತೇವೆ” ಎಂದು ಶುಕ್ಲಾ ಸೋಮವಾರ ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಆಂತರಿಕ ಬೆಳವಣಿಗೆ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣಗಳಿಂದಾಗಿ, ಕಳೆದ 15 ವರ್ಷಗಳಿಂದ ಭಾರತ ತಂಡ, ನೆರೆ ರಾಷ್ಟ್ರದ ನೆಲದಲ್ಲಿ ಕ್ರಿಕೆಟ್ ಆಡಿಲ್ಲ. 2023ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, 2025ರ ಚಾಂಪಿಯನ್ಸ್ ಟ್ರೋಫಿ ಪೂರ್ವ ನಿಗದಿಯಂತೆ ಪಾಕಿಸ್ತಾನದಲ್ಲಿ ನಡೆಯಲಿದೆ. ಇದು ಐಸಿಸಿ ಆಯೋಜಿಸುವ ಟೂರ್ನಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರವಾಗುವ ಯಾವುದೇ ಸಾಧ್ಯತೆಗಳಿಲ್ಲ.