ಬಂಗುಯಿ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ವೇಳೆ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ, ಎರಡು ತಿಂಗಳ ಅವಧಿಯಲ್ಲಿ ಸುಮಾರು 2 ಲಕ್ಷ ಮಂದಿ ತಮ್ಮ ಊರು ಬಿಟ್ಟು ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ವರದಿಗಳು ತಿಳಿಸಿವೆ. ಸಾವಿರಾರು ಜನರ ಬದುಕಿನ ಮೇಲೆ ಇದು ದೊಡ್ಡ ಪರಿಣಾಮ ಬೀರಿದೆ ಎಂದೂ ಅದು ತಿಳಿಸಿದೆ.
ಅರ್ಧಕ್ಕೂ ಹೆಚ್ಚು ಮಂದಿಯನ್ನು ದೇಶದಲ್ಲೇ ಸ್ಥಳಾಂತರಿಸಲಾಗಿದೆ. 92,000ಕ್ಕೂ ಹೆಚ್ಚು ಮಂದಿಯನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕೊಂಗೊಗೆ ಮತ್ತು 13,200 ಮಂದಿ ಕೆಮರೂನ್, ಚಡ್ ಮತ್ತು ರಿಪಬ್ಲಿಕ್ ಆಫ್ ಕೊಂಗೊಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದೊಳಗೆ ಜನರನ್ನು ಸ್ಥಳಾಂತರಿಸಲು ಕಷ್ಟವಾಗುತ್ತಿದೆ ಎಂದು ಯುಎನ್ ಎಚ್ ಸಿಆರ್ ವಕ್ತಾರ ಬೋರಿಸ್ ಚೆಶ್ರಿಕೊವ್ ತಿಳಿಸಿದ್ದಾರೆ. ಪೂರೈಕೆಗಳಿಗಾಗಿ ಬಳಸುತ್ತಿದ್ದ ಮುಖ್ಯ ರಸ್ತೆಯನ್ನೇ ಬಂದ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳಾಂತರಿಸಲಾದ ಗುಂಪುಗಳಿಗೆ ಆಶ್ರಯ ನೀಡಲಾದ ಬಟಾಂಗಫೊ ಮತ್ತು ಬ್ರಿಯಾ ತಾಣಗಳಲ್ಲಿ ಸಶಸ್ತ್ರಧಾರಿ ಗುಂಪುಗಳು ಆಶ್ರಯ ಪಡೆದಿವೆ ಎಂಬ ವರದಿಗಳಿವೆ. ಇದು ಸ್ಥಳಾಂತರಿತ ಜನರ ರಕ್ಷಣೆಯ ವಿಷಯದಲ್ಲಿ ದೊಡ್ಡ ಅಪಾಯವನ್ನು ತಂದೊಡ್ಡಿದೆ ಎಂದು ಅವರು ಹೇಳಿದ್ದಾರೆ.
ನಿರಾಶ್ರಿತರನ್ನು ಇರಿಸಲಾಗಿರುವ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಆಹಾರದ ಕೊರತೆಯಿದೆ. ಸ್ಥಳೀಯ ನದಿಯಲ್ಲಿ ಮೀನು ಹಿಡಿದು ಬದುಕುವ ಸ್ಥಿತಿ ಉಂಟಾಗಿದೆ. ಸ್ಥಳೀಯರು ನೀಡಿದ ನೆರವು ಮಾತ್ರ ಸದ್ಯಕ್ಕಿದೆ. ಕುಡಿಯುವುದಕ್ಕೆ, ಸ್ನಾನಕ್ಕೆ, ಇತರ ಉಪಯೋಗಗಳಿಗೆ ನದಿ ನೀರನ್ನೇ ಅವಲಂಬಿಸಿರುವುದರಿಂದ, ಹಲವು ಸೋಂಕಿತ ಕಾಯಿಲೆಗಳು ಹೆಚ್ಚುವ ಭೀತಿ ಎದುರಾಗಿದೆ.