ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್: ಡಿ.ಕೆ. ಶಿವಕುಮಾರ್

Prasthutha|

ಚಿಕ್ಕೋಡಿ: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

- Advertisement -


ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಚಿಕ್ಕೋಡಿಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು,ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ ಎಂದರು.


ನಾವು ಈ ಯಾತ್ರೆಯನ್ನು ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ ಇಂತಹ ಪವಿತ್ರ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

- Advertisement -


ಈ 40% ಕಮಿಷನ್ ಸರ್ಕಾರ ಈ ರಾಜ್ಯದಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಈ ಸರ್ಕಾರ ಹೊಟೇಲಿನಲ್ಲಿ ಮೆನು ಕಾರ್ಡ್ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್ ಕಾರ್ಡ್ ಹಾಕಿದ್ದಾರೆ. ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ, ಆಯುಕ್ತರಿಗೆ 15 ಕೋಟಿ, ಕೋವಿಡ್ ಪೂರೈಕೆಗೆ ಶೇ.75, ಪಿಡಬ್ಲ್ಯೂ ಕಾಮಗಾರಿಗೆ 40%, ಮಠಗಳ ಅನುದಾನಕ್ಕೆ 40%, ಮೊಟ್ಟೆ ಪೂರೈಕೆಗೆ 30% ಕಮಿಷನ್ ನಿಗದಿ ಮಾಡಿದ್ದಾರೆ. ಈ ಬಗ್ಗೆ 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.



Join Whatsapp