►10 ಕೋ.ರೂ. ವೆಚ್ಚದಲ್ಲಿ ಮಂಗಳೂರಿನ ಹಜ್ ಭವನ ನಿರ್ಮಾಣ ಕಾಮಗಾರಿ
►ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್
►ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ
►ಮೀನುಗಾರರಿಗೆ ಭರ್ಜರಿ ಗಿಫ್ಟ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡನೆ ಮಾಡುತ್ತಿದ್ದು, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಘೋಷಣೆ ಮಾಡಲಾಗಿದೆ. 1. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡಲು 10 ಕೋಟಿ ರೂ. ಒದಗಿಸಲಾಗುವುದು. 2. ಮಂಗಳೂರಿನ ಹಜ್ ಭವನದ ನಿರ್ಮಾಣ ಕಾಮಗಾರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 3. ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು. 4. ರಾಜ್ಯದಲ್ಲಿ ವಾಸಿಸುತ್ತಿರುವ ಸಿಖ್ಖ್ ಲಿಗಾರ್ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಎರಡು ಕೋಟಿ ರೂ. ಅನುದಾನದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು. 5. ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು.
- ಅಂಗನವಾಡಿ ಕಾರ್ಯಕರ್ತರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು. 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
- ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದರು. ವೈದ್ಯಕೀಯ ಕಾಲೇಜುಗಳ ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ ಅನುದಾನ ನೀಡಲಾಗುವುದು. ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 130 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದರು.
- ರಾಜ್ಯ ಸರ್ಕಾರ ಪ್ರಪ್ರಥಮ ಬಾರಿಗೆ ಸಮುದ್ರ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಿದೆ. ಇದಕ್ಕೆ 7 ಕೋಟಿ ರೂ. ಮೀಸಲು ಇಡಲಾಗಿದೆ.ಅಲ್ಲದೆ ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.