20 ಲಕ್ಷ ನಗದು, ಬೆಳ್ಳಿ ಆಭರಣಗಳು ಸೇರಿ ಸುಮಾರು 42 ಲಕ್ಷ ರೂ.ಮೌಲ್ಯದ ವಸ್ತುಗಳ ಜಪ್ತಿ: ಜಿಲ್ಲಾಧಿಕಾರಿ

Prasthutha|

ಬೆಂಗಳೂರು: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 20 ಲಕ್ಷ ರೂ.ನಗದು, ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ 48 ಕೆ.ಜಿ.ಬೆಳ್ಳಿ, ವಿವಿಧ ಉಡುಪು,ಬಟ್ಟೆಗಳು ಸೇರಿ ಸುಮಾರು 42,83,320 ರೂ.ಮೌಲ್ಯದ ವಸ್ತುಗಳನ್ನು ನಿನ್ನೆ ಶುಕ್ರವಾರ ನೆಲಮಂಗಲದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,66,980 ರೂ.ಮೌಲ್ಯದ 347 ಲೀಟರ್ ಅಕ್ರಮ ಮದ್ಯ,3 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 13 ಸಾವಿರ ಗ್ರಾಂ ಡ್ರಗ್ಸ್ ಹಾಗೂ 3 ಲಕ್ಷಕ್ಕೂ ಅಧಿಕ ಮೌಲ್ಯದ 536 ಕುಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

- Advertisement -


ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಮಾರ್ಚ್ 24 ರಂದು ಪೊಲೀಸರು ಕಾರ್ಯಾಚರಣೆ ನಡೆಸಿ , ಎರಡು ಕಾರುಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಣೆ ಮಾಡುತ್ತಿದ್ದ 20 ಲಕ್ಷ ರೂ.ನಗದು, 20,22,300 ರೂ.ಮೌಲ್ಯದ 48.156 ಕೆಜಿ ಬೆಳ್ಳಿ, 1,23,000 ರೂ.ಮೌಲ್ಯದ 410 ಸೀರೆಗಳು,87,800 ರೂ.ಮೌಲ್ಯದ 439 ಚೂಡಿದಾರ್ಗಳು, ಸುಮಾರು 39 ಸಾವಿರ ರೂ.ಮೌಲ್ಯದ ಪ್ಯಾಂಟ್ ಬಟ್ಟೆ,9,800 ರೂ.ಮೌಲ್ಯದ 49 ಶರ್ಟ್ ಪೀಸ್ಗಳು ಸೇರಿ ಒಟ್ಟು 42,83,320 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ ನೆಲಮಂಗಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.


ಜಿಲ್ಲೆಯಾದ್ಯಂತ 27 ಸಾವಿರಕ್ಕೂ ಅಧಿಕ ಬ್ಯಾನರ್,ಪೋಸ್ಟರ್,ಗೋಡೆ ಬರಹ ತೆರವು
ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಜಿಲ್ಲಾಡಳಿತವು ಕಳೆದ ಮಾ.13 ರಿಂದ ಇಂದು 25 ರ ಬೆಳಿಗ್ಗೆಯವರೆಗೆ ಜಿಲ್ಲೆಯ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಸುಮಾರು 31 ಸಾವಿರಕ್ಕೂ ಅಧಿಕ ಬ್ಯಾನರ್ ,ಪೋಸ್ಟರ್ ,ಗೋಡೆ ಬರಹ ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

- Advertisement -


ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಿದ ಗೋಡೆ ಬರಹ, ಪೋಸ್ಟರ್ ,ಬ್ಯಾನರುಗಳ ವಿವರ: ಗ್ರಾಮೀಣ ಪ್ರದೇಶಗಳಲ್ಲಿದ್ದ 512 ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 1124 ಸೇರಿ 1636 ಗೋಡೆಬರಹಗಳು.ಗ್ರಾಮೀಣ ಪ್ರದೇಶಗಳಲ್ಲಿನ 6767 ಹಾಗೂ ಪಟ್ಟಣ,ನಗರ ಪ್ರದೇಶಗಳಲ್ಲಿನ 5496 ಸೇರಿ ಒಟ್ಟು 12,263 ಪೋಸ್ಟರುಗಳು.
ಗ್ರಾಮೀಣ ಭಾಗದ 6670 ಹಾಗೂ ಪಟ್ಟಣ ಪ್ರದೇಶಗಳಲ್ಲಿನ 4465 ಸೇರಿ ಒಟ್ಟು 11,135 ಬ್ಯಾನರುಗಳು ಹಾಗೂ 1980 ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

ಖಾಸಗಿ ಸ್ಥಳಗಳಲ್ಲಿ ಬರೆಯಲಾಗಿದ್ದ 580 ಗೋಡೆ ಬರಹಗಳು,1637 ಪೋಸ್ಟರುಗಳು,1631 ಬ್ಯಾನರುಗಳು ಹಾಗೂ 613 ಇತರೆ ಪ್ರಚಾರ ಸಾಮಗ್ರಿಗಳು ಸೇರಿ ಒಟ್ಟು 4,469 ಪ್ರಚಾರ ವಸ್ತುಗಳನ್ನು ತೆಗೆಯಲಾಗಿದೆ.ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ ಎಂ.ತಿರ್ಲಾಪುರ ಅವರ ನೇತೃತ್ವದಲ್ಲಿ ಅಧಿಕಾರಿಗಳು , ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Join Whatsapp