2 MP ಕ್ಷೇತ್ರ, 1 ರಾಜ್ಯಸಭಾ ಸ್ಥಾನ ಜೆಡಿಎಸ್‌ಗೆ, 26 ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಯಲ್ಲಿ ಚಿಂತನೆ

Prasthutha|

- Advertisement -

ಬೆಂಗಳೂರು: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಎಷ್ಟು ಕ್ಷೇತ್ರ ಬಿಟ್ಟುಕೊಡಬೇಕೆಂಬ ವಿಚಾರದಲ್ಲಿ ಬಿಜೆಪಿಯಲ್ಲಿ ತೀರ್ಮಾನ ಬಹುತೇಕ ಮುಗಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಬಹುತೇಕ ತೀರ್ಮಾನವಾದ ಹೊತ್ತಿನಲ್ಲಿಯೇ ರಾಜ್ಯಸಭೆ ಸದಸ್ಯ ಸ್ಥಾನದ ವಿಚಾರವೂ ಮುನ್ನೆಲೆಗೆ ಬಂದಿದ್ದು ಆ ವಿಚಾರವಾಗಿ ಎರಡೂ ಪಕ್ಷದ ನಾಯಕರು ಅದಾಗಲೇ ಒಂದು ಸುತ್ತಿನ‌ ಮಾತುಕತೆ ಮಾಡಿಮುಗಿಸಿದ್ದಾರೆ ಎನ್ನಲಾಗಿದೆ.

ಕಳೆದ ಮೂರ‌್ನಾಲ್ಕು ಚುನಾವಣೆಯಲ್ಲಿ ಜೆಡಿಎಸ್ ಪಡೆದ ಮತಗಳಿಕೆ ಆಧಾರ ಇಟ್ಟುಕೊಂಡು ಜೆಡಿಎಸ್ ಪ್ರಾಬಲ್ಯ ಇರುವ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್‌ಗೆ ಜೆಡಿಎಸ್ ಕಡೆಯಿಂದ ನೀಡಲಾಗಿದೆ. ಇದರ ಆಧಾರದ ಮೇಲೆ ಕನಿಷ್ಠ 6 ಕ್ಷೇತ್ರಗಳನ್ನು ನೀಡಬೇಕು ಎನ್ನುವ ಬೇಡಿಕೆಯನ್ನು ಜೆಡಿಎಸ್ ಮುಂದಿಟ್ಟಿದೆ.

- Advertisement -

ಆದರೆ ರಾಜ್ಯ ಬಿಜೆಪಿ ಮುಖಂಡರು ಅದನ್ನು ಒಪ್ಪುತ್ತಿಲ್ಲ. ಐದಾರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಏನೂ ಪ್ರಯೋಜನವಾಗುವುದಿಲ್ಲ ಜೆಡಿಎಸ್‌ಗೆ ಅಷ್ಟೇ ಅಲ್ಲ, ಬಿಜೆಪಿಗೂ ನಷ್ಟವಾಗಲಿದೆ ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರ ಒಮ್ಮತಾಭಿಪ್ರಾಯವಾಗಿದೆ

ಬಿಜೆಪಿಯಲ್ಲಿ ಬಹುತೇಕ ಫೈನಲ್ ಆದ ತೀರ್ಮಾನದಂತೆ, ಜೆಡಿಎಸ್‌ಗೆ ಹಾಸನ ಮತ್ತು ಮಂಡ್ಯ ಎರಡು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಟ್ಟು, ಇನ್ನುಳಿದ ಕ್ಷೇತ್ರಗಳನ್ನು ಬಿಜೆಪಿಯೇ ಉಳಿಸಿಕೊಂಡು ಸ್ಪರ್ಧೆ ಮಾಡುವುದಾಗಿದೆ. ಅದೇ ಪಕ್ಷಕ್ಕೆ ಹೆಚ್ಚು ಲಾಭದಾಯಕವಾಗಲಿದೆ ಎನ್ನುವುದು ಮುಖಂಡರ ಪ್ರತಿಪಾದನೆಯಾಗಿದೆ.

ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಒಂದೇ ಸ್ಥಾನ ನೀಡಲು ತೀರ್ಮಾನವಾಗಿದೆ(ಬಹುತೇಕ). ಈಗಿನ ಸಂಖ್ಯಾ ಬಲದ ಆಧಾರದ ಮೇಲೆ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅವರ ಬೆಂಬಲವನ್ನು ಬಿಜೆಪಿಗೆ ಪಡೆದು, ಅವರಿಗೆ ಒಂದು ರಾಜ್ಯಸಭಾ ಸ್ಥಾನ ಬಿಟ್ಟುಕೊಡುವುದು ಸೂಕ್ತ ಎನ್ನುವ ಮಾತುಕತೆಗಳು ರಾಜ್ಯ ಮುಖಂಡರುಗಳ ನಡುವೆ ನಡೆದಿದೆ. ಈ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೂ ಕಳುಹಿಸಿಕೊಡಲಾಗುವುದು ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಜೆಡಿಎಸ್ ಕೂಡ ಈ ಸಲಹೆಗೆ ಒಪ್ಪಿಕೊಂಡರೆ ಅವರಿಗೂ ಅನುಕೂಲವಾಗಲಿದೆ. ಬಿಜೆಪಿ ಕೂಡ ರಾಜ್ಯದ 28 ಕ್ಷೇತ್ರಗಳ ಪೈಕಿ
26 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ರಾಜ್ಯ ಮುಖಂಡರ ಸಲಹೆಗೆ ದೆಹಲಿ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೊ ಮುಂದೆ ಕಾದು ನೋಡಬೇಕು.



Join Whatsapp