ಗುವಾಹಟಿ: ಇಬ್ಬರು ಅಮಾಯಕರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಅಸ್ಸಾಂ ನಲ್ಲಿ ಪ್ರತಿಭಟನೆ ನಡೆಸಿದ ಮೂವರು ಮುಸ್ಲಿಮ್ ಯುವಕರನ್ನು ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಬಂಧಿತರನ್ನು ಅಸ್ಮತ್ ಅಲಿ ಅಹ್ಮದ್, ಚಾಂದ್ ಮುಹಮ್ಮದ್ ಮತ್ತು ಶರೀಪುದ್ದೀನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಅಸ್ಮತ್ ಅಲಿ ಅಹ್ಮದ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದು, ಚಾಂದ್ ಮುಹಮ್ಮದ್ ಸ್ಥಳೀಯ ಪಂಚಾಯತ್ ನಲ್ಲಿ ಅಧ್ಯಕ್ಷರಾಗಿದ್ದಾರೆ. ಶರೀಪುದ್ದೀನ್ ದಿನಗೂಲಿ ನೌಕಕನಾಗಿ ದುಡಿಯುತ್ತಿದ್ದಾರೆ.
ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 143, 147, 148, 149, 341, 333, 353, 325, 326, 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದರ್ರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ್ ಬಿಸ್ವಾ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಮಧ್ಯೆ ಆರೋಪಿಗಳನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲ ಪೊಲೀಸರು ಗುಂಡೇಟಿನಿಂದ ಶರೀಪುದ್ದೀನ್ ಎಂಬವನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದಿನಿಂದಲೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಂಟನ್ನು ಬೆಸೆಯಲು ಪ್ರಯತ್ನ ನಡೆಸಿದ್ದು, ಬಂಧಿತ ಆರೋಪಿಗಳು ಪಿ.ಎಫ್.ಐ ಸದಸ್ಯರಲ್ಲ ಎಂದು ದರ್ರಾಂಗ್ ಎಸ್ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಮಾಯಕ ಮುಸ್ಲಿಮರನ್ನು ಹತ್ಯೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.