ಬೆಂಗಳೂರು; ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 2.35 ಕೋಟಿ ರೂಗಳ ಮೌಲ್ಯದ ಚಿನ್ನಾಭರಣ ಮತ್ತು ಚಿನ್ನದ ಪೇಸ್ಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಚಿನ್ನಾಭರಣ ಮತ್ತು ಚಿನ್ನದ ಪೇಸ್ಟ್ ವಶಪಡಿಸಿಕೊಂಡ ಪ್ರಕರಣದ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಿದ್ದಾರೆ.
ಶಾರ್ಜಾ ಮತ್ತು ದುಬೈನಿಂದ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಬಂದಿದ್ದ 18 ಮಂದಿ ಪ್ರಯಾಣಿಕರನ್ನು ಏರ್ ಪೋರ್ಟ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಅವರಿಂದ 2.35 ಕೋಟಿ ರೂ. ಮೌಲ್ಯದ 4.944 ಗ್ರಾಂ ಚಿನ್ನದ ಪೇಸ್ಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ಪೈಕಿ 17 ಮಂದಿ ಶಾರ್ಜಾದಿಂದ ಮತ್ತು ಒಬ್ಬ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಅವರ ವರ್ತನೆಯಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ದೇಹವನ್ನು ಸ್ಕ್ಯಾನಿಂಗ್ ಮಾಡಿಸಿದಾಗ ಚಿನ್ನದ ಪೇಸ್ಟ್ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ಪ್ಯಾಂಟ್ ಮತ್ತು ಒಳ ಉಡುಪುಗಳಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಏರ್ ಅರೇಬಿಯಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕನಿಂದ 421.45 ಗ್ರಾಂನ ಚಿನ್ನದ ಪುಡಿ, ಬಳೆ ಮತ್ತು ಚಿನ್ನದ ಬಿಸ್ಕತ್ತುಗಳ ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಶಾರ್ಜಾದಿಂದ ಬೆಂಗಳೂರಿಗೆ ಬರುತ್ತಿದ್ದ 47 ವರ್ಷದ ಆಂಧ್ರಪ್ರದೇಶದ ಕಡಪ ಮೂಲದ ಪ್ರಯಾಣಿಕ 116.48 ಗ್ರಾಂ ತೂಕದ ಚಿನ್ನದ ಬಿಸ್ಕತ್ತುಗಳು ಮತ್ತು 126.88 ಗ್ರಾಂ ತೂಕದ 3 ಬಳೆಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯ 52 ವರ್ಷದ ಪ್ರಯಾಣಿಕ ತನ್ನ ಬ್ಯಾಗ್ ನಲ್ಲಿ ತುಂಬಿದ್ದ ಒಳ ಉಡುಪುಗಳ ಬಾಕ್ಸ್ ನಲ್ಲಿ ಬಂಗಾರದ ಪುಡಿಯನ್ನು ಸಾಗಿಸುತ್ತಿದ್ದ. ಈತನ ಬ್ಯಾಗ್ ಅನ್ನು ಪರೀಕ್ಷೆಗೊಳಪಡಿಸಿದಾಗ 178.09 ಗ್ರಾಂ ಚಿನ್ನ ಹಾಗೂ ಚಿನ್ನದ ಪುಡಿ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದರು