►ಕ್ರಿಮಿನಲ್ ಕೇಸ್ ಆರೋಪಿ ಸರಕಾರಿ ಉದ್ಯೋಗ ಪಡೆದು ವಂಚಿಸಿರುವ ಆರೋಪ
►ಪ್ರಕರಣ ಬೇಧಿಸಿದ ಬೀಟ್ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ
ಮಂಗಳೂರು : 1995ರಲ್ಲಿ ಬಂಟ್ವಾಳ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮಲ್ಲಿ ನಡೆದಿದ್ದ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪದ್ಮನಾಭ (54) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿದ್ದ ಆರೋಪಿಯನ್ನು ಬಂಧಿಸಿ ಕರೆತಂದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪದ್ಮನಾಭ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಘಟ್ಟದಲ್ಲಿ ಸರ್ಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವಾಗಲೇ ಸರ್ಕಾರಿ ನೌಕರಿ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪವೂ ಕೇಳಿಬಂದಿದೆ. ಆರೋಪಿಯ ಬಂಧನದ ಬಳಿಕ ಪೊಲೀಸರ ನಡೆಯ ಬಗ್ಗೆಯೂ ಅನುಮಾನಗಳು ಮೂಡಿದ್ದು, ಆರೋಪಿಯ ವಿರುದ್ಧ ಕಲಂ 420 ಅಡಿ ಕೇಸ್ ದಾಖಲಿಸದಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಏನಿದು ಪ್ರಕರಣ ?
1995ರ ಅಕ್ಟೋಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನ ಸಮೀಪದ ನರಿಕೊಂಬು ಗ್ರಾಮದ ದಿನಗೂಲಿ ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಎಂಬುವರ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಗ್ರಾಮದ ಭೂಮಾಲೀಕರಾದ ನಾರಾಯಣ ಸೋಮಯಾಜಿ ಮತ್ತು ಅವರ ಸಹಚರರಾದ ವಿಠಲ, ಪದ್ಮನಾಭ, ಸುರೇಶ ಸಪಲ್ಯ ಎಂಬವರ ಮೇಲೆ ಅಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 1995ರ ಅಕ್ಟೋಬರ್ 24ರಂದು ನಾರಾಯಣ ಸೋಮಯಾಜಿ ತನ್ನ ಜಮೀನಿನಲ್ಲಿ ಆಯೋಜಿಸಿದ್ದ RSS ಬೈಠಕ್’ನಲ್ಲಿ ದಿನಗೂಲಿ ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಪಾಲ್ಗೊಂಡಿರಲಿಲ್ಲ. ಈ ಕಾರಣಕ್ಕೆ ಅವರ ಮೇಲೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿತ್ತು. ಕಾರ್ಮಿಕರಿಬ್ಬರ ಮೇಲೆ ಹಲ್ಲೆ ನಡೆಸಿ, ತಲೆ ಬೋಳಿಸಿ ಬಣ್ಣ ಹಚ್ಚಿ ದೈಹಿಕವಾಗಿ ಮತ್ತು ಮಾನಸಿಕ ಹಿಂಸೆ ನೀಡಲಾಗಿತ್ತು. ಕೊನೆಗೆ ಸಂತ್ರಸ್ತರ ಮೇಲೆಯೇ ಅಡಿಕೆ ಕದ್ದಿರುವ ಆರೋಪ ಹೊರಿಸಲಾಗಿತ್ತು.
ಈ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭೂಮಾಲೀಕ ನಾರಾಯಣ ಸೋಮಯಾಜಿ ಮತ್ತು ಮೂವರು ಸಹಚರರ ಮೇಲೆ ಕೇಸ್ ದಾಖಲಾಗಿ ನ್ಯಾಯಾಲಯದಲ್ಲಿ ಅಪರಾಧ ಕೂಡ ಸಾಭಿತಾಗಿತ್ತು. ಆದರೆ ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ಪದ್ಮನಾಭ ಪೋಲಿಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಕಳೆದ 28 ವರ್ಷಗಳಿಂದ ನ್ಯಾಯಾಲಯ ಬಂಧನದ ವಾರೆಂಟ್ ಜಾರಿ ಮಾಡುತ್ತಿದ್ದರೂ ಇದುವರೆಗೂ ಯಾವ ಪೋಲಿಸ್ ಅಧಿಕಾರಿಯೂ ಆರೋಪಿ ಬಂಧನಕ್ಕೆ ಶ್ರಮವಹಿಸಿರಲಿಲ್ಲ. ಸ್ಥಳೀಯರಾದ ಪ್ರಭಾವಿ RSS ಮುಖಂಡರೊಬ್ಬರ ಪ್ರಭಾವ ಬೀರುತ್ತಿದ್ದ ಕಾರಣಕ್ಕೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರು ಎಂದು ಆರೋಪಗಳು ಕೇಳಿಬರುತ್ತಿತ್ತು.
28 ವರ್ಷಗಳ ಬಳಿಕ ಆರೋಪಿಯ ಬಂಧನವಾಗಲು ಗ್ರಾಮದ ಬೀಟ್ ಪೊಲೀಸ್ ಸಿಬ್ಬಂದಿ ಪ್ರವೀಣ್ ಶಿವಪುರ ಎಂಬವರ ಕರ್ತವ್ಯ ನಿಷ್ಠೆ ಕಾರಣವಾಗಿದೆ. ಈ ಲಾಂಗ್ ಪೆಂಡಿಂಗ್ ಕೇಸ್’ನ ಹಿಂದೆ ಬಿದ್ದ ಪ್ರವೀಣ್ ಶಿವಪುರ ಅವರು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆರೋಪಿ ಪದ್ಮನಾಭ ಅವರು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿರುವುದನ್ನು ಪತ್ತೆಹಚ್ಚಿದ್ದರು. ಬಂಟ್ವಾಳ ಠಾಣೆಯ ಸಿಬ್ಬಂದಿ ಗಣೇಶ್ ಜೊತೆಗೂಡಿ ಶಿಡ್ಲಘಟ್ಟದಲ್ಲಿದ್ದ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
28 ವರ್ಷಗಳ ಬಳಿಕ ಸೆರೆಸಿಕ್ಕಿರುವ ಆರೋಪಿ ಪದ್ಮನಾಭ ಅವರು ಸರ್ಕಾರಿ ನೌಕರರಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವಾಗಲೇ ಸರ್ಕಾರಕ್ಕೆ ವಂಚಿಸಿ ಸರ್ಕಾರಿ ನೌಕರಿ ಪಡೆದಿರುವುದು ಬೆಳಕಿಗೆ ಬಂದಿದೆ. ಪದ್ಮನಾಭ ಅವರನ್ನು ಸರ್ಕಾರ ತಕ್ಷಣವೇ ಸರ್ಕಾರಿ ಉದ್ಯೋಗದಿಂದ ವಜಾ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.