ರೊನಾಲ್ಡೊಗೆ 1985 ಕೋಟಿ ರೂ. ಸಂಬಳದ ಆಫರ್ !

Prasthutha|

ಲಿಸ್ಬನ್: ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಮುಂಚೂಣಿಯಲ್ಲಿರುವ ಪೋರ್ಚುಗಲ್’ನ ಕ್ರಿಸ್ಟಿಯಾನೋ ರೊನಾಲ್ಡೊಗೆ ಸೌದಿ ಅರೇಬಿಯಾದ ಪುಟ್ಬಾಲ್ ಕ್ಲಬ್ ಒಂದು ಬೃಹತ್ ಮೊತ್ತದ ಆಫರ್ ಒಂದನ್ನು ಮುಂದಿಟ್ಟಿದೆ.

- Advertisement -

ಸದ್ಯ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿರುವ ಸ್ಟಾರ್ ಸ್ಟ್ರೈಕರ್ ರೊನಾಲ್ಡೊ, ಕ್ಲಬ್ ತೊರೆಯುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದು, ಅಭ್ಯಾಸ ಪಂದ್ಯಗಳಿಂದ ದೂರ ಉಳಿದಿದ್ದಾರೆ. ಮುಂದೆ ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಆದರೆ ಈ ನಡುವೆ ರೊನಾಲ್ಡೊರನ್ನು ತಮ್ಮತ್ತ ಸೆಳೆಯಲು ಪ್ರಮುಖ ಕ್ಲಬ್ಗಳ ಜೊತೆಯಲ್ಲಿ ಸೌದಿ ಅರೇಬಿಯಾದ ತಂಡವೊಂದು ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ವಾರ್ಷಿಕ, ಬರೋಬ್ಬರಿ 1985 ಕೋಟಿ ರೂ. ಸಂಬಳದ ಆಫರ್’ಅನ್ನು ಮುಂದಿಟ್ಟಿದೆ.

ಇದರ ಜೊತೆಯಲ್ಲಿ ಟ್ರಾನ್ಸ್ಫರ್ ಮೊತ್ತವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್’ಗೆ 283 ಕೋಟಿ ಮತ್ತು ರೊನಾಲ್ಡೊ ಏಜೆಂಟ್ ಜಾರ್ಜ್ ಮೆಂಡೆಸ್’ಗೆ 180 ಕೋಟಿ ರೂ. ಪಾವತಿಸಲು ಸೌದಿ ಅರೇಬಿಯಾದ ಕ್ಲಬ್ ಮುಂದಾಗಿದೆ ಎಂದು ಎಕ್ಸ್ಪ್ರೆಸ್ ಸ್ಪೋರ್ಟ್ಸ್, ಸನ್ ಸ್ಪೋರ್ಟ್ಸ್ ಸೇರಿದಂತೆ ಪ್ರಮುಖ ಇಂಗ್ಲಿಷ್ ಮಾಧ್ಯಮಗಳು ವರದಿ ಮಾಡಿದೆ. ಆದರೆ ತಂಡದ ಹೆಸರನ್ನು ಬಹಿರಂಪಡಿಸಿಲ್ಲ.
ಈ ಒಪ್ಪಂದಕ್ಕೆ ರೊನಾಲ್ಡೊ ಸಹಿ ಹಾಕಿದರೆ, ಕ್ಲಬ್ ಟ್ರಾನ್ಸ್ಫರ್ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಆಗಲಿದೆ.

- Advertisement -

ಈ ನಡುವೆ ರೊನಾಲ್ಡೊ ಏಜೆಂಟ್ ಮೆಂಡೆಸ್, ಲೀಗ್-1ನ ಪ್ರಮುಖ ಕ್ಲಬ್ ಪ್ಯಾರಿಸ್ ಸೈಂಟ್ ಜರ್ಮನ್ ಕ್ಲಬ್ ಜೊತೆಗೆ ನಡೆಸಿದ ಮಾತುಕತೆ ವಿಫಲವಾಗಿದೆ. ರೊನಾಲ್ಡೊ ಪಿಎಸ್ ಜಿ ತಂಡವನ್ನು ಸೇರುವುದೇ ಆದರೆ,ತಾನು ತಂಡವನ್ನು ತೊರೆಯುವುದಾಗಿ ಮತ್ತೋರ್ವ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಹೇಳಿದ್ದಾರೆ ಎನ್ನಲಾಗಿದೆ. ಮೆಸ್ಸಿ ಜೊತೆಗಿನ ಒಪ್ಪಂದವನ್ನು ಒಂದು ವರ್ಷದ ಮಟ್ಟಿಗೆ ಪಿಎಸ್ ಜಿ ಇತ್ತೀಚೆಗಷ್ಟೇ ನವೀಕರಿಸಿತ್ತು.

ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ರೊನಾಲ್ಡೊ ಒಪ್ಪಂದ 2023ಕ್ಕೆ ಅಂತ್ಯವಾಗಲಿದೆ. ಆದರೆ ಪ್ರತಿಷ್ಠಿತ ಚಾಂಪಿಯನ್ಸ್ ಲೀಗ್ ಟೂರ್ನಿಗೆ ಅರ್ಹತೆ ಪಡೆಯಲು ಯುನೈಟೆಡ್ ವಿಫವಾಗಿದೆ. ಈ ಹಿನ್ನಲೆಯಲ್ಲಿ ಯುಸಿಎಲ್’ನಲ್ಲಿ ಆಡಲು ರೊನಾಲ್ಡೊ ಉತ್ಸುಕರಾಗಿದ್ದು, ತಮ್ಮ ಹಿಂದಿನ ಕ್ಲಬ್ ಆದ ಜುವೆಂಟಸ್ ಅಥವಾ ಚೆಲ್ಸಿಯಾ ತಂಡವನ್ನು ಸೇರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಯುನೈಟೆಡ್ ಪರವಾಗಿ ಕಳೆದ ಆವೃತ್ತಿಯಲ್ಲಿ ರೊನಾಲ್ಡೊ 24 ಗೋಲು ಗಳಿಸಿದ್ದರೂ ಸಹ, ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡವು ಆರನೇ ಸ್ಥಾನಕ್ಕೆ ಕುಸಿದಿತ್ತು. ಆ ಮೂಲಕ ಯುಸಿಎಲ್’ಗೆ ಅರ್ಹತೆ ಪಡೆಯಲು ವಿಫಲವಾಗಿದೆ.

Join Whatsapp