ಟೀಮ್‌ ಇಂಡಿಯಾ ಚೊಚ್ಚಲ ವಿಶ್ವಕಪ್ ಸಾಧನೆಗೆ 39 ವರ್ಷ !

Prasthutha|

ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಕಪಿಲ್‌ ದೇವ್‌ ಮತ್ತು ಸಂಗಡಿಗರು ಭಾರತದ ಪಾಲಿಗೆ ಚೊಚ್ಚಲ ವಿಶ್ವಕಪ್‌ ಗೆದ್ದ ಸುದಿನಕ್ಕೆ ಇಂದು 39ರ ಸಂಭ್ರಮ. ಭಾರತದ ಕ್ರಿಕೆಟ್‌ ಇತಿಹಾಸ ಬದಲಾಯಿಸಿದ ಕಪಿಲ್‌ ದೇವ್‌ ಮತ್ತು ತಂಡಕ್ಕೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಬಿಸಿಸಿಐ, ಸಚಿನ್‌, ಸೆಹ್ವಾಗ್‌ ಸೇರಿದಂತೆ ಹಿರಿಯ- ಕಿರಿಯ ಕ್ರಿಕೆಟಿಗರು, ಕ್ರಿಕೆಟ್‌ ಅಭಿಮಾನಿಗಳು ಅಂದಿನ ಚಾರಿತ್ರಿಕ ನಿಮಿಷದ ಫೋಟೋ- ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

- Advertisement -

ಇದೇ ದಿನದಂದು 1983ರಲ್ಲಿ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ಬಲಿಷ್ಠ ವೆಸ್ಟ್‌ ಇಂಡೀಸ್‌ ವಿರುದ್ಧ 43 ರನ್‌ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿತ್ತು. ವಿಶ್ವಕಪ್‌ ವಿಜೇತ ತಂಡದ ಅತಿ ಕಿರಿಯ ವಯಸ್ಸಿನ ಕಪ್ತಾನ (24 ವರ್ಷ 170 ದಿನ) ಎಂಬ ದಾಖಲೆಯನ್ನೂ ಕಪಿಲ್‌ ತಮ್ಮದಾಗಿಸಿಕೊಂಡಿದ್ದರು.

1983ರ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಲಿದೆ ಎಂಬುದನ್ನು ಯಾರೂ ಉಹಿಸಿರಲಿಲ್ಲ. ವಿವಿ ರಿಚರ್ಡ್ಸ್‌, ಮೈಕಲ್‌ ಹೋಲ್ಡಿಂಗ್‌, ಮಾಲ್ಕಮ್‌ ಮಾರ್ಷಲ್‌ ಸೇರಿದಂತೆ ಬಹುತೇಕ ತಾರಾ ಆಟಗಾರರಿಂದಲೇ ಕೂಡಿದ್ದ ಕ್ಲೈವ್‌ ಲಾಯ್ಡ್‌ ನಾಯಕತ್ವದ ಎದುರಾಳಿ ವೆಸ್ಟ್‌ ಇಂಡೀಸ್‌, ಟೂರ್ನಿಯ ಬಲಿಷ್ಠ ತಂಡವಾಗಿತ್ತು. 1975 ಮತ್ತು 1979ರ ವಿಶ್ವಕಪ್‌ ಟೂರ್ನಿಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಷ್ಟೇ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ 1983ರ ಫೈನಲ್‌ನಲ್ಲಿ, ಎರಡು ಬಾರಿ ವಿಶ್ವಕಪ್‌ ವಿಜೇತ ವೆಸ್ಟ್ ಇಂಡೀಸ್‌ ತಂಡವನ್ನು ಮಣಿಸುವುದು ಬಹುತೇಕ ಅಸಾಧ್ಯವೆಂದೇ ಭಾವಿಸಲಾಗಿತ್ತು. ಆದರೆ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿ ಕಪಿಲ್‌ ದೇವ್‌ ಪಡೆ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತ್ತು.

- Advertisement -

ನಿಗದಿತ 60 ಓವರ್‌ಗಳ ಫೈನಲ್‌ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ, 54.4 ಓವರ್‌ಗಳಲ್ಲಿ 183 ರನ್‌ಗಳಿಗೆ ಆಲೌಟ್‌ ಆಗಿತ್ತು. 38 ರನ್‌ಗಳಿಸಿದ್ದ ಕ್ರಿಸ್‌ ಶ್ರೀಕಾಂತ್‌ ಅವರದ್ದೇ ಸರ್ವಾಧಿಕ ಗಳಿಕೆ. ಉಳಿದಂತೆ ಸಂದೀಪ್‌ ಪಾಟೀಲ್‌ 27 ಮತ್ತು ಮೊಹಿಂದರ್‌ ಅಮರನಾಥ್‌ 26 ರನ್‌ ಗಳಿಸಿದ್ದರು. ಆರಂಭಿಕ ಸುನಿಲ್‌ ಗವಾಸ್ಕರ್‌ ಕೇವಲ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

184 ರನ್‌ ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್‌,  ಕೇವಲ 140 ರನ್‌ಗಳಿಗೆ ಆಲೌಟ್‌ ಆಗಿತ್ತು. ಮದನ್‌ ಲಾಲ್‌ ಹಾಗೂ ಮೊಹೀಂದರ್‌ ಅಮರ್‌ನಾಥ್‌ ಅವರ ಬಿಗು ದಾಳಿಯೆದುರು 52 ಓವರ್‌ಗಳಲ್ಲೇ ಕ್ಲೈವ್‌ ಲಾಯ್ಡ್‌ ಪಡೆ ಮಂಡಿಯೂರಿತ್ತು. ಆ ಮೂಲಕ 43 ರನ್‌ ಅಂತರದಲ್ಲಿ ಅಮೋಘ- ಐತಿಹಾಸಿಕ ಗೆಲುವು ಸಾಧಿಸಿದ ಭಾರತ, ಕ್ರಿಕೆಟ್‌ ವಿಶ್ವ ಸಾಮ್ರಾಟನಾಗಿ ಮೆರೆದಿತ್ತು.

ಮದನ್‌ ಲಾಲ್‌ ಹಾಗೂ ಅಮರ್‌ನಾಥ್‌ ತಲಾ 3 ವಿಕೆಟ್‌ ಪಡೆದರೆ, ಬಲ್ವಿಂದರ್‌ ಸಂಧು 2 ಮತ್ತು ಕ್ಯಾಪ್ಟನ್‌ ಕಪಿಲ್‌ ದೇವ್‌ 1 ವಿಕೆಟ್‌ ಪಡೆದಿದ್ದರು. ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡ ಬಳಿಕ, ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಎರಡನೇ ಬಾರಿ 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದು ಸಂಭ್ರಮಿಸಿತ್ತು. ಆ ಬಳಿಕ 2015 ಹಾಗೂ 2019 ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಹಂತದಲ್ಲೇ ಟೀಮ್‌ ಇಂಡಿಯಾ ಮುಗ್ಗರಿಸಿತ್ತು

Join Whatsapp