ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅತಿದೊಡ್ಡ ಮಿಲಿಟರಿ ಆಸ್ಪತ್ರೆ ಬಳಿ ಭಾರಿ ಸ್ಫೋಟ ಸಂಭವಿಸಿದ್ದು, 19 ಮಂದಿ ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್‌ನ ಸರ್ದಾರ್ ಮೊಹಮ್ಮದ್ ದಾವುದ್ ಖಾನ್ ಆಸ್ಪತ್ರೆಯ ಮುಖ್ಯದ್ವಾರರದ ಬಳಿ ಬೈಕ್’ನಲ್ಲಿ ಬಂದ ಸುಸೈಡ್ ಬಾಂಬರ್, ತನ್ನನ್ನೇ ಸ್ಫೋಟಿಸಿಕೊಂಡಿದ್ದಾನೆ. ಬಳಿಕ ಆತನ ಜೊತೆ ಬಂದಿದ್ದ ಬಂದೂಕುಧಾರಿಗಳು ಆಸ್ಪತ್ರೆಯೊಳಗೆ ಪ್ರವೇಶಿಸಿ ಮನಬಂದಂತೆ ಗುಂಡುಹಾರಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ದಾವುದ್ ಖಾನ್ ಆಸ್ಪತ್ರೆಯ ಸಮೀಪ ಎರಡನೇ ಸ್ಫೋಟವು ಸಂಭವಿಸಿದೆ.
ಭಾರೀ ಸ್ಫೋಟದ ಕಾರಣದಿಂದಾಗಿ ಅಫ್ಘಾನ್ ಮಿಲಿಟರಿ ಆಸ್ಪತ್ರೆ ಸುತ್ತಲೂ ದಟ್ಟ ಹೊಗೆ ತುಂಬಿಕೊಂಡಿದೆ. ಯಾವುದೇ ಸಂಘಟನೆಗಳೂ ಸ್ಫೋಟದ ಹೊಣೆಯನ್ನು ಇದುವರೆಗೂ ಹೊತ್ತುಕೊಂಡಿಲ್ಲ.
ಸರ್ದಾರ್ ಮೊಹಮ್ಮದ್ ದೌದ್ ಖಾನ್ ಆಸ್ಪತ್ರೆಯು, ಅಫ್ಘಾನಿಸ್ತಾನದ ರಾಜಧಾನಿಯಲ್ಲಿಯೇ 400 ಹಾಸಿಗೆ ಸಾಮರ್ಥ್ಯವಿರುವ ಅತಿ ದೊಡ್ಡ ಆಸ್ಪತ್ರೆಯಾಗಿದೆ. ಈ ಕಾರಣದಿಂದಲೇ ಉಗ್ರರು ಟಾರ್ಗೆಟ್ ಮಾಡಿರಬಹುದು ಎಂದು ತಾಲಿಬಾನ್ ಸರ್ಕಾರದ ವಕ್ತಾರ ಖಾರಿ ಸಯೀದ್ ಖೋಸ್ಟಿ ಹೇಳಿದ್ದಾರೆ.