ಬೀದರ್: ಜಿಲ್ಲೆಯ ಹೊಕ್ರಾಣ ಗ್ರಾಮದಲ್ಲಿ ಕಾಡು ಹಂದಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ವಿತರಿಸಲಾಗಿದೆ.
ಕವಿತಾ(45) ಮೃತಪಟ್ಟ ಮಹಿಳೆ. ನಿನ್ನೆ ಕೂಲಿ ಕೆಲಸಕ್ಕೆ ಹೊಲಕ್ಕೆ ಹೋಗಿದ್ದ ಅವರ ಮೇಲೆ ಕಾಡು ಹಂದಿ ದಾಳಿ ಮಾಡಿ ಹೊಟ್ಟೆಗೆ ಕಚ್ಚಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕವಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
ಪರಿಸರ, ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ. ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕವಿತಾ ಅವರು ಗುರುವಾರ ಜೋಳದ ಕಟಾವಿಗೆ ಹೋದಾಗ ಹೊಲದಲ್ಲಿ ಕಾಡು ಹಂದಿ ದಾಳಿಯಿಂದ ಮೃತಪಟ್ಟಿರುವುದು ವಿಷಾದನೀಯ ಸಂಗತಿ. ಅವರ ಕುಟುಂಬಕ್ಕೆ 24 ತಾಸಿನಲ್ಲಿ ಸರ್ಕಾರದ ನಿಯಮದ ಪ್ರಕಾರ ₹15 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಚಿವ ಖಂಡ್ರೆ ಪತ್ರಕರ್ತರಿಗೆ ತಿಳಿಸಿದರು.