ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಕ್ರಮವಾಗಿ ನೋಟಿಸ್ ನೀಡದೆ ತಮ್ಮ ಮನೆ ಕೆಡವಿದ್ದಕ್ಕೆ ಸತತ 8 ವರ್ಷ ಕಾನೂನು ಹೋರಾಟ ನಡೆಸಿ ಮಹಿಳೆಯೊಬ್ಬರು 15 ಲಕ್ಷ ರೂ. ಪರಿಹಾರ ಪಡೆದಿದ್ದಾರೆ.
ಆರ್. ಪುರಂ ಹೋಬಳಿಯ ದೊಡ್ಡನೆಕುಂದಿಯ ನಾರಾಯಣ ರೆಡ್ಡಿ ಬಡಾವಣೆಯ ನಿವಾಸಿ ಕವಿತಾ ಪೊಡ್ವಾಲ್ 2016ರಲ್ಲಿ ಬಿಬಿಎಂಪಿ ಕೈಗೊಂಡ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಕುರಿತು ಆದೇಶ ಹೊರಡಿಸಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಿಬಿಎಂಪಿ ಕೆಎಂಸಿ ಕಾಯಿದೆ ಸೆಕ್ಷನ್ 321(2)ರ ಅನ್ವಯ ಷೋಕಾಸ್ ನೋಟಿಸ್ ಅಥವಾ ತಾತ್ಕಾಲಿಕ ಅದೇಶವನ್ನು ಹಾಗೂ ಸೆಕ್ಷನ್ 321(3)ರ ಅನ್ವಯ ಅಂತಿಮ ಆದೇಶ ಅರ್ಜಿದಾರರಿಗೆ ತಲುಪಿಯೇ ಇಲ್ಲ. ಹಾಗಾಗಿ ಮನೆ ತೆರವು ಕಾನೂನು ಬಾಹಿರ ಎಂದು ಹೈಕೋರ್ಟ್ ಆದೇಶ ನೀಡಿದೆ.
ಅರ್ಜಿದಾರರ ಮನೆಯಲ್ಲಿನ ವಸ್ತುಗಳಿಗೆ ಹಾನಿ ಆಗಿರುವುದರಿಂದ, ಮನೆ ತೆರವುಗೊಳಿಸಿರುವುದರಿಂದ ಪಾಲಿಕೆ ಅವರಿಗೆ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು ಆ 10 ಲಕ್ಷ ರೂ.ಗಳನ್ನು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅವರಿಂದ ವಸೂಲು ಮಾಡಿಕೊಳ್ಳಬೇಕು. ಅಲ್ಲದೆ, ಪಾಲಿಕೆಯ ಕಾನೂನು ಬಾಹಿರ ಕೃತ್ಯದಿಂದ ಅರ್ಜಿದಾರರಿಗೆ ಆಗಿರುವ ಮಾನಸಿಕ ಆಘಾತಕ್ಕೆ 5 ಲಕ್ಷ ರೂ. ಪರಿಹಾರವನ್ನು ನೀಡಬೇಕು” ಎಂದು ಆದೇಶ ನೀಡಿದೆ.
ಲೋಕೋಪಯೋಗಿ ಇಲಾಖೆಯ ವಲಯ ಕಾರ್ಯಕಾರಿ ಇಂಜಿನಿಯರ್ ಮನೆ ತೆರವು ಮಾಡಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿ, 45 ದಿನಗಳಲ್ಲಿವರದಿಯನ್ನು ಸಲ್ಲಿಸಬೇಕು. ಆನಂತರ ಮುಖ್ಯ ಆಯುಕ್ತರು ಪರಿಹಾರ ಹಣವನ್ನು ನೀಡಬೇಕು. ಅರ್ಜಿದಾರರು ಮೊದಲು ಮನೆ ಇದ್ದ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವವರೆಗೆ 2016ರ ಏಪ್ರಿಲ್ 25ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳಿಗೆ 10 ಸಾವಿರ ರೂ.ಗಳನ್ನು ಪರಿಹಾರದ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರು ಬೆಂಗಳೂರು ನಗರದ ಪೂರ್ವ ತಾಲೂಕಿನ ಕೆ. ಆರ್. ಪುರಂ ಹೋಬಳಿಯ ದೊಡ್ಡನೆಕುಂದಿಯ ನಾರಾಯಣ ರೆಡ್ಡಿ ಬಡಾವಣೆಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಆದರೆ ಅವರು ಅಕ್ರಮವಾಗಿ ಮನೆಯನ್ನು ನಿರ್ಮಾಣ ಮಾಡಿದ್ದಾರೆಂಬ ದೂರು ಬಂದಿತ್ತು.ನಿಯಮದಂತೆ ಬಿಬಿಎಂಪಿ ಅವರಿಗೆ ನೋಟಿಸ್ ನೀಡಿ ಅವರ ಉತ್ತರ ಪಡೆದು ಆನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ತಮಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆಯನ್ನು ತೆರವುಗೊಳಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಕೋರ್ಟ್ ಇಂತಹ ಪ್ರಕರಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಯಾವ್ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಹಲವು ನಿರ್ದೇಶನಗಳನ್ನು ನೀಡಿದೆ. ಅವುಗಳೆನೇಂದರೆ, ಯಾವುದೇ ಅಕ್ರಮ ಕಟ್ಟಡಗಳ ಬಗ್ಗೆ ದೂರು ಬಂದಾಗ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ನೋಟಿಸ್ ನೀಡಬಾರದು.ನೋಟಿಸ್ ನೀಡುವ ಮುನ್ನ ಸ್ಥಳ ಪರಿಶೀಲನೆಯನ್ನು ನಡೆಸಬೇಕು, ನಕ್ಷೆ ಮಂಜೂರಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದಾಗಿದೆ. ಜತೆಗೆ ಮಂಜೂರಾದ ನಕ್ಷೆಯಲ್ಲಿಯಾವುದಾದರೂ ಉಲ್ಲಂಘನೆಗಳು ಆಗಿವೆಯೇ ಎಂಬುದನ್ನು ಪರಿಶೀಲಿಸಬೇಕು.ಸೆಟ್ ಬ್ಯಾಕ್ (ಅಕ್ಕ ಪಕ್ಕ ಜಾಗ ಬಿಡುವುದು), ಕಟ್ಟಡದ ಎತ್ತರ, ಎಫ್‌ಎಆರ್ ಮತ್ತಿತರ ಉಪ ನಿಯಮ (ಬೈಲಾ) ಪಾಲಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಏನೇನು ಉಲ್ಲಂಘನೆಯಾಗಿದೆ ಎಂಬುದನ್ನು ಪಟ್ಟಿ ಮಾಡಬೇಕು. ಆನಂತರವೇ ನಿರ್ದಿಷ್ಟ ಉಲ್ಲಂಘನೆಗಳು ಕಂಡು ಬಂದರೆ ಮಾತ್ರ ನೋಟಿಸ್ ನೀಡಿ ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಜರುಗಿಸತಕ್ಕದ್ದು ಎಂದು ನ್ಯಾಯಪೀಠ ಆದೇಶಿದೆ. ಎಲ್ಲ ಎಲ್ಲಾ ನಿರ್ದೇಶನಗಳನ್ನು ಬಿಬಿಎಂಪಿ ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸಲಾಗಿದೆ