ಸ್ಯಾಂಟ್ರೋ ರವಿಗೆ 15 ದಿನಗಳ ನ್ಯಾಯಾಂಗ ಬಂಧನ

Prasthutha|

ಮೈಸೂರು: ಗುಜರಾತಿನಲ್ಲಿ ಬಂಧಿಸಿ ಕರೆತಂದಿರುವ  ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ನನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಜೆಎಂಎಫ್​ಸಿ ಕೋರ್ಟ್  ಆದೇಶ ಹೊರಡಿಸಿದೆ.

- Advertisement -

ಎರಡನೇ ಶನಿವಾರವಾದ ಇಂದು(ಜ.14) ನ್ಯಾಯಾಲಯಕ್ಕೆ ರಜೆ ಹಿನ್ನೆಲೆಯಲ್ಲಿ ಪೊಲೀಸರು ರವಿಯನ್ನು ವಿವಿ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಬಿಗಿ ಭದ್ರತೆ ಮೂಲಕ ಮೈಸೂರಿನ ವಿಜಯನಗರ ಠಾಣೆಯಿಂದ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಡ್ಜ್​ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಾಯಿತು.

- Advertisement -

ನ್ಯಾಯಾಧೀಶರ ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಬ್ಬರು ಇನ್ಸ್’ಪೆಕ್ಟರ್, ಇಬ್ಬರು ಪಿಎಸ್ಐ ಸೇರಿ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್​ನಲ್ಲಿ ನಿನ್ನೆ  ಬಂಧಿಸಿ ಇಂದು ಕರ್ನಾಟಕಕ್ಕೆ ಕರೆತಂದಿದ್ದರು.

ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್​ನಲ್ಲಿ ಸ್ಯಾಂಟ್ರೋ ರವಿ ಇದ್ದುದನ್ನು ಪತ್ತೆ ಮಾಡಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ನಂತರ ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ಕರೆದೊಯ್ಯಲಾಯ್ತು ಎಂದು ಮೂಲಗಳು ತಿಳಿಸಿವೆ.

ಸ್ಯಾಂಟ್ರೋ ರವಿ ಗುಜರಾತ್​’ನಲ್ಲಿ ಇರಬಹುದು ಎಂಬ ಅನುಮಾನದ ಮೇಲೆ ಕರ್ನಾಟಕ ಪೊಲೀಸರ ತಂಡವನ್ನು ತರಾತುರಿಯಲ್ಲಿ ಅಹಮದಾಬಾದ್​ಗೆ ಕಳುಹಿಸಲಾಗಿತ್ತು. ಈ ಪೈಕಿ ಮೈಸೂರು ಪೊಲೀಸರ ಬಳಿ ಸ್ಯಾಂಟ್ರೋ ರವಿಯ ಹಳೆಯ ಮೂರು ಫೋಟೊಗಳಿದ್ದವು. ಅವನ ತಲೆಯಲ್ಲಿ ಕೂದಲು ಇಲ್ಲ. ಹೀಗಾಗಿ ಟೋಪನ್ ಧರಿಸುತ್ತಾನೆ ಎಂಬ ಮಾಹಿತಿಯಿದ್ದ ಪೊಲೀಸರು ಬೋಳುತಲೆ, ಗಡ್ಡಮೀಸೆ ಇಲ್ಲದ ರೇಖಾಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಲೆಕ್ಕಾಚಾರದಂತೆ ಅವನೂ ಗುರುತು ಬದಲಿಸಿಕೊಂಡಿದ್ದ. ಆದರೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಅವನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಸ್ಯಾಂಟ್ರೋ ರವಿ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್​ ಎಂಬಾತನನ್ನು ರಾಯಚೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಸ್ಯಾಂಟ್ರೋ ರವಿ ಗುಜರಾತ್​’ನಲ್ಲಿ ತಲೆಮರೆಸಿಕೊಂಡಿರುವುದು ತಿಳಿದುಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.



Join Whatsapp