ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಡಿಯಲ್ಲಿ ನೀಡಲಾಗುವ ಆಹಾರ ಧಾನ್ಯಗಳ ಚೀಲದಲ್ಲಿ ಪ್ರಧಾನಿ ಮೋದಿಯ ಚಿತ್ರ ಹಾಕಲು ಕೇಂದ್ರ ಸರ್ಕಾರ 15 ಕೋಟಿ ರೂ. ವೆಚ್ಚ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಕೇವಲ ಐದು ರಾಜ್ಯಗಳಿಗಾಗಿ ಇಷ್ಟು ದೊಡ್ಡ ಮೊತ್ತ ವ್ಯಯಿಸಲಾಗಿದೆ.
ಆರ್ಟಿಐ ಕಾರ್ಯಕರ್ತ ಅಜಯ್ ಬೋಸ್ ಸಲ್ಲಿಸಿದ್ದ ಅರ್ಜಿಗೆ ದೊರಕಿರುವ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಆರ್ಟಿಐ ಮಾಹಿತಿ ಪ್ರಕಾರ, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್ಸಿಐ) ರಾಜಸ್ಥಾನ, ಮಿಜೋರಾಂ, ಸಿಕ್ಕಿಂ, ತ್ರಿಪುರಾ, ಮೇಘಾಲಯದಲ್ಲಿ ಆಹಾರ ಧಾನ್ಯವನ್ನು ವಿತರಿಸಲು ಪ್ರಧಾನಿ ಮೋದಿ ಚಿತ್ರ ಒಳಗೊಂಡಿರುವ ಲೋಗೋ ಇರುವ ನೇಯ್ದ ಚೀಲಗಳನ್ನು ಖರೀದಿ ಮಾಡಲು ಟೆಂಡರ್ ಅಂತಿಮಗೊಳಿಸಿದೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.
ರಾಜ್ಯಸ್ಥಾನ ಎಫ್ಸಿಐ ಕಚೇರಿ ಮೋದಿ ಚಿತ್ರವಿರುವ 1.07 ಕೋಟಿ ಸಿಂಥೆಟಿಕ್ ಬ್ಯಾಗ್ಗಳಿಗೆ 13.29 ಕೋಟಿ ರೂಪಾಯಿ ವೆಚ್ಚ ಮಾಡಿದರೆ, ತ್ರಿಪುರಾ 5.98 ಲಕ್ಷ ಕೋಟಿ ಬ್ಯಾಗ್ಗಳಿಗೆ 85.51 ಲಕ್ಷ ರೂಪಾಯಿ ವ್ಯಯಿಸುತ್ತಿದೆ. ಇನ್ನು ಮೇಘಾಲಯದ ಎಫ್ಸಿಐ ಸ್ಥಳೀಯ ಕಚೇರಿ 4.22 ಲಕ್ಷ ಬ್ಯಾಗ್ಗಳಿಗೆ 52.75 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. 1.75 ಲಕ್ಷ ಬ್ಯಾಗ್ಗಳಿಗೆ ಮಿಜೋರಾಂ 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಆರ್ಟಿಐ ಮಾಹಿತಿ ನೀಡಿದೆ.