ಭುವನೇಶ್ವರ್: ಛತ್ತೀಸ್ ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್‌ನಲ್ಲಿ ಕನಿಷ್ಠ 14 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಕೂಡ ಕಾರ್ಯಾಚರಣೆ ನಡೆದಿತ್ತು. ಸೋಮವಾರದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಒಬ್ಬ ಕೋಬ್ರಾ ಜವಾನ್ ಗಾಯಗೊಂಡಿದ್ದರು.
ಛತ್ತೀಸ್ ಗಢ-ಒಡಿಶಾ ಗಡಿಯಲ್ಲಿರುವ ಮೈನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಡಿಶಾದಲ್ಲಿ ನಕ್ಸಲರ ಮುಖ್ಯಸ್ಥನಾಗಿದ್ದ, ಜೈರಾಮ್ ಅಲಿಯಾಸ್ ಚಲಪತಿ ಕೂಡ ಹತ್ಯೆಯಾದವರಲ್ಲಿ ಸೇರಿದ್ದಾನೆ ಎನ್ನಲಾಗಿದೆ. ಈತನ ಪತ್ತೆಗೆ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಅಲ್ಲದೆ, ಈ ಎನ್ ಕೌಂಟರ್ ನಲ್ಲಿ ಕುಖ್ಯಾತ ನಕ್ಸಲರಾದ ಮನೋಜ್ ಮತ್ತು ಗುಡ್ಡು ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯ ಭದ್ರತಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 10 ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.