ಭುವನೇಶ್ವರ: ಒಡಿಶಾದಲ್ಲಿ ಸಿಡಿಲು ಬಡಿದು 12 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಡಿಲು ಬಡಿದು ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗೀರ್‌ನಲ್ಲಿ ಇಬ್ಬರು ಮತ್ತು ಅಂಗುಲ್, ಬೌಧ್, ಜಗತ್‌ಸಿಂಗ್‌ಪುರ ಮತ್ತು ಧೆಂಕನಾಲ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಮುಂಗಾರು ಚುರುಕಾಗಿದೆ. ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್‌ನಲ್ಲಿ ಮಧ್ಯಾಹ್ನದ 90 ನಿಮಿಷಗಳ ಕಾಲಾವಧಿಯಲ್ಲಿ ಕ್ರಮವಾಗಿ 126 ಮಿಮೀ ಮತ್ತು 95.8 ಮಿಮೀ ಮಳೆಯಾಗಿದೆ. ಗಜಪತಿ ಮತ್ತು ಕಂಧಮಾಲ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಎಂಟು ಜಾನುವಾರುಗಳು ಸಾವನ್ನಪ್ಪಿವೆ.
ಶನಿವಾರ ಕೇವಲ 2 ಗಂಟೆಗಳಲ್ಲಿ 61,000 ಬಾರಿ ಸಿಡಿಲು ಬಡಿದಿದೆ. ರಾಜಧಾನಿ ಭುವನೇಶ್ವರದಲ್ಲಿ ಅತಿ ಹೆಚ್ಚು ಸಿಡಿಲು ಸಂಭವಿಸಿದೆ ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದಲ್ಲಿ ಸೆಪ್ಟೆಂಬರ್ 7 ರವರೆಗೆ ತೀವ್ರ ಹವಾಮಾನ ಎಚ್ಚರಿಕೆ ನೀಡಿದೆ.