ಕೋಟಾ: ದಲಿತ ಕುಟುಂಬದ ಹನ್ನೆರಡು ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬದ ಸದಸ್ಯರೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಕ್ಕಾಗಿ ಮತ್ತು ಗ್ರಾಮದ ಸರಪಂಚ್’ನ ಪತಿಯ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ ಹಿನೆಲೆಯಲ್ಲಿ ಅಸಮಾಧಾನಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬರಾನ್ ಜಿಲ್ಲೆಯ ಬಪ್ಚಾ ಪೊಲೀಸ್ ಠಾಣಾ ವ್ಯಾಪ್ತಿಯ ಭೂಲೋನ್ ಗ್ರಾಮದ ರಾಜೇಂದ್ರ ಅವರ ಕುಟುಂಬದ 12 ಮಂದಿ ಸದಸ್ಯರು ಶುಕ್ರವಾರ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಎಲ್ಲಾ ಸದಸ್ಯರು ಮತಾಂತರದ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಹಿಂದೂ ದೇವತೆಗಳ ವಿಗ್ರಹ, ಚಿತ್ರಗಳನ್ನು ಗ್ರಾಮದ ಬೈತ್ಲಿ ನದಿಗೆ ಹಾಕಿದರು ಎಂದು ತಿಳಿದು ಬಂದಿದೆ.
ದೇಶದಲ್ಲಿ ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರೂ ಸ್ವತಂತ್ರರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಗ್ರಾಮದಲ್ಲಿ ಬೇರೆ ಯಾರೂ ಕೂಡ ತಮ್ಮ ಧರ್ಮವನ್ನು ಬದಲಾಯಿಸಿಲ್ಲ ಎಂದು ತಿಳಿಸಿದ್ದಾರೆ.