ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ 1997ರಲ್ಲಿ ವಶಪಡಿಸಿಕೊಂಡಿರುವ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವುದಕ್ಕಾಗಿ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ ಮನವಿ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರು ಮೂಲದ ಆರ್ ಟಿಐ ಕಾರ್ಯಕರ್ತ ಟಿ ನರಸಿಂಹಮೂರ್ತಿ ಅವರು ಡಿವಿಎಸಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ತಮಿಳುನಾಡು ಸಿಎಂ ದಿವಂಗತ ಜಯಲಲಿತಾ ಅವರಿಂದ ತಮ್ಮ ಇಲಾಖೆ ವಶಪಡಿಸಿಕೊಂಡಿರುವ 28 ವಸ್ತುಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಡಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಜಯಲಲಿತಾಗೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವ ಪ್ರಕರಣ ಬೆಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಚಿನ್ನ, ವಜ್ರ ಮತ್ತು ಹರಳುಗಳಿಂದ ಹೊದಿಸಲಾದ 30 ಕೆಜಿ ಚಿನ್ನಾಭರಣ ಮಾತ್ರವೇ ರಾಜ್ಯದ ಖಜಾನೆಯಲ್ಲಿ ಇದೆ ಎಂದು ಕರ್ನಾಟಕ ಸರ್ಕಾರ ಹೇಳಿತ್ತು. ಆದ್ದರಿಂದ ಉಳಿದ ವಸ್ತುಗಳು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದ ತಮಿಳುನಾಡು ಭ್ರಷ್ಟಾಚಾರ ನಿಗ್ರಹ ದಳದ ವಶದಲ್ಲಿದೆ. ಹಾಗಾಗಿ ಅವುಗಳನ್ನು ಆದಷ್ಟು ಬೇಗ ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು” ಎಂದು ನರಸಿಂಹಮೂರ್ತಿ ಕೋರಿದ್ದಾರೆ.
ನರಸಿಂಹ ಮೂರ್ತಿ ಅವರು ಒದಗಿಸಿರುವ ಪಟ್ಟಿಯ (ಅನುಬಂಧ) ಪ್ರಕಾರ ಅಮೂಲ್ಯವಾದ ಕಲ್ಲುಗಳು, 700 ಕೆಜಿ ಬೆಳ್ಳಿ ವಸ್ತುಗಳು, 11,344 ದುಬಾರಿ ಸೀರೆಗಳು, 44 ಎಸಿ ಯಂತ್ರಗಳು, 131 ಸೂಟ್ಕೇಸ್ ಗಳು, 91 ಕೈಗಡಿಯಾರಗಳು, 146 ಅಲಂಕರಿಸಿದ ಕುರ್ಚಿಗಳು, 750 ಅಲಂಕರಿಸಿದ ಚಪ್ಪಲ್ ಗಳು, 215 ಸ್ಫಟಿಕ-ಕತ್ತರಿಸಿದ 7 ಹರಳುಗಳು, ಗೋಡೆ ಗಡಿಯಾರಗಳು, 86 ಫ್ಯಾನ್ ಗಳು, 146 ಅಲಂಕಾರಿಕ ಪರಿಕರಗಳು, 81 ಹ್ಯಾಂಗಿಂಗ್ ಲ್ಯಾಂಪ್ ಗಳು, 20 ಸೋಫಾ ಸೆಟ್ ಗಳು, 250 ಶಾಲುಗಳು, 12 ರೆಫ್ರಿಜರೇಟರ್ಗಳು, 10 ಟಿವಿ ಸೆಟ್ ಗಳು, 8 CVR ಸೆಟ್ ಗಳು ಮತ್ತು 140 ವಿಡಿಯೋ ಕ್ಯಾಸೆಟ್ ಗಳು ಇತ್ಯಾದಿಯನ್ನು ಒಳಗೊಂಡಿವೆ.