ಬೆಂಗಳೂರು: 11,133 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಗಣಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಇಡೀ ರಾಜ್ಯದಲ್ಲಿರುವ 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗಿದೆ. 11,133ರಲ್ಲಿ ನಗರಸಭೆ, ಪುರಸಭೆ, ಮತ್ತು ಪಟ್ಟಣ ಪಂಚಾಯತಿಯಲ್ಲಿ 5,533 ಪೌರ ಕಾರ್ಮಿಕರು ಮತ್ತು ಕಾರ್ಪೊರೇಷನ್ ಗಳಿಂದ 1927 ಪೌರ ಕಾರ್ಮಿಕರು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 3670 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟ ಸೋಮವಾರ ಒಪ್ಪಿಗೆ ಕೊಟ್ಟಿದೆ ಎಂದರು.
ರಾಜ್ಯದಲ್ಲಿ ಪೌರ ಕಾರ್ಮಿಕರ ಹೋರಾಟದ ಹಿಂದೆ ಪೌರ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಬೆಂಗಳೂರಿನಲ್ಲಿ ಶಾಸಕರಾಗಿದ್ದ ಐಪಿಡಿ ಸಾಲಪ್ಪನವರು ಇದ್ದರು. ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಹೋರಾಟ ಮಾಡಿದ್ದರು. ಆದರೆ, ಇದುವರೆಗೂ ಆಗಿರಲಿಲ್ಲ. ಅವರನ್ನು ಮುಖ್ಯಮಂತ್ರಿಗಳ ಬಳಿ ಪೌರ ಕಾರ್ಮಿಕರನ್ನು ಕರೆದುಕೊಂಡು ಹೋಗಿ ವಿನಂತಿ ಮಾಡಿದಾಗ ಪರಿಶೀಲನೆ ಮಾಡ್ತಿವಿ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದರು.
ಸೋಮವಾರ 11,133 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದೇವೆ. ಬೆಂಗಳೂರಿಗೆ ಸೀಮಿತವಾಗಿ ಹೋರಾಟಗಳು ಆಗಬಾರದು. ನಾನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಹೇಳಿದರು.