ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ವೈದ್ಯರ ದಂಡೇ ದೌಡಾಯಿಸಿತ್ತು. ವೈದ್ಯರು ರೆಸ್ಟ್ ಸಲಹೆ ನೀಡಿದ್ದರು. ಆದರೆ ಶಿವಾಜಿನಗರದ ಆರ್ಬಿಎಎನ್‌ಎಂಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ, 102 ಡಿಗ್ರಿ ಜ್ವರದ ನಡುವೆಯೂ ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಡಿಸಿಎಂ ಜನರ ಅಹವಾಲು ಸ್ವೀಕರಿಸಿದ್ದಾರೆ.
ಕಳೆದ ಎರಡು ಕಾರ್ಯಕ್ರಮಗಳಲ್ಲಿ ನೀಡಿದಂತೆ ಹೆಚ್ಚಿನ ಸಮಯವನ್ನು ನಿಮಗೆ ನೀಡಲಾಗದಿದ್ದರೂ ನಿಮ್ಮ ಅಹವಾಲು ಸ್ವೀಕರಿಸುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಕಳೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಜನ ನನ್ನನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನರು ರಾಜಕಾರಣಿಗಳನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿಂದೆ ನನ್ನ ಕ್ಷೇತ್ರದ ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೆ. ಜನ ಸೇವೆಯೇ ದೇವರ ಸೇವೆ ಎಂದು ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಬರೆಸಿದ್ದಾರೆ. ಅದರಂತೆ ನಡೆಯಲು ಶ್ರಮಿಸುತ್ತಿದ್ದೇನೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಆಲಿಸಲು ಸೂಚನೆ ನೀಡಿದ್ದಾರೆ. ನನ್ನ ಜತೆ ಉತ್ತಮ ಅಧಿಕಾರಿಗಳ ತಂಡವಿದೆ. ನಾನು ಹಾಗೂ ಶಾಸಕರು ಮಾತ್ರ ಇಲ್ಲಿ ಬಂದಿಲ್ಲ. ಸುಮಾರು 200-300 ಅಧಿಕಾರಿಗಳು ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇವೆ. ಇದರಿಂದ ಜನಪರ ಆಡಳಿತಕ್ಕೆ ಅನುಕೂಲವಾಗಲಿದೆ ಎಂದು ಡಿಸಿಎಂ ಹೇಳಿದ್ದಾರೆ.
102 ಡಿಗ್ರಿ ಜ್ವರದ ನಡುವೆಯೂ ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಅಹವಾಲು ಸ್ವೀಕರಿಸಿದ ಡಿಸಿಎಂ ಅವರ ಕಾರ್ಯಬದ್ಧತೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.