ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ರಾಜ್ಯದ ಜನರಿಗೆ 100 ಯೂನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ತಿಂಗಳಿಗೆ 100 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಜನರಿಗೆ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅವುಗಳಲ್ಲಿ ಒಂದು ಪ್ರತಿ ಮನೆಗೆ 200 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ರಾಜಸ್ಥಾನದಲ್ಲೂ ಗೆಹ್ಲೋಟ್ ಚುನಾವಣೆ ಸಮೀಪಿಸುತ್ತಿದ್ದಂತೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.