6-12 ತರಗತಿಗಳಿಗೆ ಶೇ.100 ರಷ್ಟು ಹಾಜರಾತಿಗೆ ಅವಕಾಶ, ವಾರದಲ್ಲಿ 5 ದಿನ ಶಾಲಾ ಕಾಲೇಜಿಗೆ ಅನುಮತಿ: ಬೊಮ್ಮಾಯಿ

Prasthutha|

►ಸಿನಿಮಾ ಮಂದಿರಗಳಲ್ಲಿ ಶೇಕಡಾ 100ರಷ್ಟು ಸೀಟು ಭರ್ತಿಗೆ ಒಪ್ಪಿಗೆ

- Advertisement -

ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.

ಅವರು ಇಂದು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

- Advertisement -

 ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ 0.66 % ಇದೆ. ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು. ಶೇ. 1ಕ್ಕಿಂತ ಹೆಚ್ಚಾದರೆ ಶೇ. 50 ರಷ್ಟು ಭರ್ತಿಗೆ ಹಾಗೂ ಶೇ. 2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು ಎಂದು ತಿಳಿಸಿದರು. ಇದೇ ಮಾನದಂಡವನ್ನು ಅನುಸರಿಸಿ ಅಕ್ಟೋಬರ್ 3 ರಿಂದ ಪಬ್ ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಚಿತ್ರ ಮಂದಿರಗಳಲ್ಲಿ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ.ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಅವರು ನುಡಿದರು.

ರಾತ್ರಿ ಕರ್ಫ್ಯೂ ವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನಿಗದಿ ಪಡಿಸಲಾಗುವುದು. ಆರರಿಂದ ಹನ್ನೆರಡನೇ ತರಗತಿ ವರೆಗೆ ಶೇ. 100 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು. ವಾರದಲ್ಲಿ ಐದು ದಿನ ಶಾಲಾ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು.ಗಡಿ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp