ಅಬುಧಾಬಿ: ಯುಎಇಯ ಲುಲು ಗ್ರೂಪ್‌ಗೆ 600,000 ದಿರ್ಹಾಮ್ (1.5 ಕೋಟಿ ರೂ.) ವಂಚಿಸಿ ತಲೆಮರೆಸಿಕೊಂಡಿದ್ದ ಭಾರತೀಯ ಉದ್ಯೋಗಿಯನ್ನು ಅಬುಧಾಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮುಹಮ್ಮದ್ ನಿಯಾಸ್ (38) ಬಂಧಿತ ಆರೊಪಿ.
ಆರೋಪಿ ಅಬುಧಾಬಿಯ ಖಲಿದಿಯಾ ಮಾಲ್‌ನ ಲುಲು ಹೈಪರ್ ಮಾರ್ಕೆಟ್‌ನಲ್ಲಿ ನಗದು ಕಚೇರಿ ಉಸ್ತುವಾರಿಯಾಗಿದ್ದನು.
ವಂಚನೆಯ ಕುರಿತು ಅಬುಧಾಬಿಯ ಅಲ್-ಖಲೀದಿಯಾ ಪೊಲೀಸ್ ಕೇಂದ್ರಕ್ಕೆ ಲುಲು ಗ್ರೂಪ್ ದೂರು ನೀಡಿತ್ತು. ತಕ್ಷಣ ಅಪರಾಧ ತನಿಖಾ ತಂಡಗಳು ಮಾಹಿತಿಯನ್ನು ಸಂಗ್ರಹಿಸಿ ಶೀಘ್ರದಲ್ಲಿಯೇ ಅಪರಾಧಿಯನ್ನು ಬಂಧಿಸಿದೆ. ಸದ್ಯ ಆರೋಪಿಯನ್ನು ಪ್ರಾಸಿಕ್ಯೂಟರ್ ಮುಂದೆ ಹಾಜರುಪಡಿಸಲಾಗಿದೆ.
ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಅಬುಧಾಬಿ ಪೊಲೀಸರ ಜನರಲ್ ಕಮಾಂಡ್‌ಗೆ ಲುಲು ಗ್ರೂಪ್‌ನ ಅಧಿಕೃತರು ಧನ್ಯವಾದ ಅರ್ಪಿಸಿದ್ದಾರೆ.
ಮಾರ್ಚ್ 25ರಂದು ಮುಹಮ್ಮದ್ ನಿಯಾಸ್ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ವಂಚನೆಯ ಪ್ರಕರಣ ಬೆಳಕಿಗೆ ಬಂದಿತ್ತು. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕೃತರು ದೂರು ನೀಡಿದ್ದರು. ಆರೋಪಿ 15 ವರ್ಷಗಳಿಂದ ಲುಲು ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ತನ್ನ ಕುಟುಂಬದೊಂದಿಗೆ ಅಬುಧಾಬಿಯಲ್ಲಿ ವಾಸಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕಂಪನಿಯ ಅಧಿಕಾರಿಗಳು ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.