ಬೆಂಗಳೂರು: ಹೊಸ ವರ್ಷದ ಸ್ವಾಗತಕ್ಕೆ ಕ್ಷಣಗಣನೆ ಶುರುವಾಗಿದೆ. ನ್ಯೂ ಇಯರ್ ಸೆಲೆಬ್ರೇಷನ್‌ಗೆ ಸಾಕಷ್ಟು ಮಂದಿ ಪ್ರವಾಸಿತಾಣಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಪ್ರವಾಸಿಗರ ಹಾಟ್‌ಸ್ಪಾಟ್ ಚಿಕ್ಕಳ್ಳಾಪುರದ ನಂದಿಬೆಟ್ಟ ಪ್ರವೇಶಕ್ಕೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 7 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಂಜೆ 7ಗಂಟೆ ನಂತರ ಪ್ರವಾಸಿಗರಿಗೆ ನಿರ್ಬಂಧ ಇರಲಿದ್ದು, ಜನವರಿ 1ರಂದು ಎಂದಿನಂತೆ ತೆರಳಬಹುದು. ಇನ್ನು ಕೆಆರ್ಎಸ್ ಹಿನ್ನೀರು, ಬಲಮುರಿ, ಎಡಮುರಿ, ಕಾವೇರಿ ನದಿ ತೀರ ಪ್ರವೇಶಕ್ಕೆ ಜನವರಿ 1ರ ರಾತ್ರಿವರೆಗೂ ನಿರ್ಬಂಧ ಹೇರಲಾಗಿದೆ. ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ ತೀರದಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಇತರೆ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆ ತನಕ ಬಂದ್ ಆಗಲಿವೆ. ಹಾಗೆಯೇ ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ಇಂದು ರಾತ್ರಿ 10 ಗಂಟೆಗೆ ಡಿಜೆ, ಸ್ಪೀಕರ್ ಬಂದ್ ಮಾಡಬೇಕು. ಅನುಮತಿ ಪಡೆಯದೇ ಪಾರ್ಟಿ ಮಾಡುವಂತಿಲ್ಲ ಎಂದು ಎಸ್ಪಿ ಆದೇಶಿಸಿದ್ದಾರೆ.
ಕಾರವಾರದ ಮುರುಡೇಶ್ವರ ಕಡಲ ತೀರ 20 ದಿನದಿಂದ ಬಂದ್ ಆಗಿತ್ತು. ಇಂದಿನಿಂದ ಪ್ರವಾಸಿಗರಿಗೆ ತೆರೆಯಲಾಗುತ್ತಿದೆ. ಜೋಗ ಜಲಪಾತ ವೀಕ್ಷಣೆಗೂ, ಜನವರಿ 1ರಿಂದ ಮಾರ್ಚ್ 15ರ ತನಕ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ ಈಗ ಜಲಪಾತ ವೀಕ್ಷಣೆಗಿದ್ದ ನಿರ್ಬಂಧ ತೆರವು ಮಾಡಲಾಗಿದೆ. ಜೋಗ ನಿರ್ವಹಣಾ ಪ್ರಾಧಿಕಾರ ಪ್ರವೇಶದ್ವಾರ ಬಿಟ್ಟು ಉಳಿದೆಡೆಯಿಂದ ಫಾಲ್ಸ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ.