ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ಮುಖ್ಯಸ್ಥರಾಗಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇಮಕ

Prasthutha|

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಇಂದು ಅಧಿಕೃತವಾಗಿ ತಂಡವನ್ನು ರಚಿಸಿದೆ. ಇದೇ ಸಮಯದಲ್ಲಿ ಪ್ರಕರಣದ ಬಗ್ಗೆ ಪ್ರಜ್ವಲ್ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

- Advertisement -

ಎಸ್‌ಐಟಿ ತಂಡದ ಮುಖ್ಯಸ್ಥರನ್ನಾಗಿ ಸಿಐಡಿಯ ಎಡಿಜಿಪಿ(ಅಪರ ಪೊಲೀಸ್ ಮಹಾನಿರ್ದೇಶಕ), ಹಿರಿಯ ಐಪಿಎಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್ ಅವರನ್ನು ನೇಮಕಗೊಳಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಇವರು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಕೂಡ ಆಗಿದ್ದರು.

ವಿಶೇಷ ತನಿಖಾ ತಂಡದ ಸದಸ್ಯರನ್ನಾಗಿ ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀಮತಿ ಸುಮನ್ ಡಿ ಪನ್ನೇಕರ್ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿಯಾಗಿರುವ ಶ್ರೀಮತಿ ಸೀಮಾ ಲಟ್ಕರ್ ಅವರನ್ನು ನೇಮಿಸಲಾಗಿದೆ.

- Advertisement -

ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಕುಮಾರ ಸ್ವಾಮಿ: ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನಾಗಲಿ ದೇವೇಗೌಡರಾಗಲಿ ಎಂದೂ ಸಹ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಯಾರಾದರೂ ಕಷ್ಟ ಹೇಳಿಕೊಂಡು ಬಂದರೆ ಅವರ ಕಷ್ಟ ಪರಿಹರಿಸಿ ಕಳುಹಿಸಿದ್ದೇವೆ. ನಾವಂತೂ ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವ ನೀಡಿದ್ದೇವೆ. ಯಾರೇ ತಪ್ಲು ಮಾಡಿದರೂ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಎಸ್‌ಐಟಿ ತನಿಖೆಗೆ ಈಗಾಗಲೇ ಸರ್ಕಾರ ಆದೇಶ ಮಾಡಿದೆ. ಎಸ್‌ಐಟಿ ತನಿಖೆಯಿಂದ ವಾಸ್ತವಾಂಶ ಹೊರಗೆ ಬರಲಿ. ಈ ನೆಲದ ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವಂತೂ ಯಾವುದಕ್ಕೂ ತಪ್ಪು ಮಾಡಿದ ವಿಷಯದಲ್ಲಿ ಯಾರಿಗೂ ಕ್ಷಮಿಸುವ ಪ್ರಶ್ನೆಯಿಲ್ಲ. ತನಿಖೆಯ ವರದಿ ಸಂಪೂರ್ಣ ಹೊರಗೆ ಬರಲಿ ಬಂದ ನಂತರ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಜಿಟಿ ದೇವೇಗೌಡ: ಪ್ರಕರಣದ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮಾತನಾಡಿದ್ದು, ಈಗಾಗಲೇ ಮಹಿಳೆಯರಿಗೆ ದೌರ್ಜನ್ಯ ಮಾಡಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಸರ್ಕಾರ ಕೂಡ ಎಸ್‌ಐಟಿ ತನಿಖೆಗೆ ನೀಡಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು. ತಪ್ಪು ಸಾಬೀತಾದರೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿಡಿಯೋಗಳನ್ನು ನಾನು ನೋಡಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.

ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಮಾತನಾಡುತ್ತೇನೆ. ಇನ್ನುಳಿದಂತೆ ಇದ್ಯಾವುದು ಗೊತ್ತಿಲ್ಲ ಎಂದಿದ್ದಾರೆ.

Join Whatsapp