ಹವಾಮಾನ ವೈಪರೀತ್ಯ: ಪಂಚರತ್ನ ಯಾತ್ರೆ ಮುಂದೂಡಿದ ಜೆಡಿಎಸ್

Prasthutha|

ಬೆಂಗಳೂರು: ಜೆಡಿಎಸ್ ಪಕ್ಷವು ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮಹತ್ವಕಾಂಕ್ಷೆಯ ಯೋಜನೆಯಾದ ಪಂಚರತ್ನ ಯಾತ್ರೆಯನ್ನು ಮುಂದೂಡಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಚುನಾವಣಾ ಪ್ರಚಾರ ರ್ಯಾಲಿಗೆ ಹಸಿರು ನಿಶಾನೆ ತೋರಿಸಲಾಗಿತ್ತಾದರೂ, ಮುಂದಿನ ಕೆಲವು ದಿನಗಳಲ್ಲಿ ಪ್ರತಿಕೂಲ ಹವಾಮಾನವನ್ನು ಊಹಿಸಲಾಗಿದ್ದು ಈ ನಿಟ್ಟಿನಲ್ಲಿ ಪಂಚರತ್ನ ಯಾತ್ರೆಯನ್ನು ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಘೋಷಣೆ ಮಾಡಿದ್ದಾರೆ.

- Advertisement -

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವು ರೋಡ್ ಶೋವನ್ನು ಯೋಜಿಸಿತ್ತು. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಸೇರಿದಂತೆ ಯಾತ್ರೆಗೆ ಮಂಗಳವಾರ ಬೆಳಿಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಸಿರು ನಿಶಾನೆ ತೋರಿದರು. “ಮಳೆ ಹೆಚ್ಚಾಗುತ್ತಿದ್ದಂತೆ, ಯಾತ್ರೆ, ಸಮಾವೇಶ ಮತ್ತು ಗ್ರಾಮ ವಾಸ್ತವ್ಯವನ್ನು ಒಂದು ವಾರ ಮುಂದೂಡಲು ನಾವು ನಿರ್ಧರಿಸಿದ್ದೇವೆ” ಎಂದು ಕುಮಾರಸ್ವಾಮಿ ಹೇಳಿದರು. ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮುಂದಿನ ವಾರ ಯಾತ್ರೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಹೊಸ ದಿನಾಂಕಗಳನ್ನು ಒಂದೆರಡು ದಿನಗಳಲ್ಲಿ ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.

ಈ ಯಾತ್ರೆಯು ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಮಹಿಳಾ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಪಂಚರತ್ನ ಯಾತ್ರೆಯು ಕೋಲಾರದ ಐದು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿ ನಂತರ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಕುಣಿಗಲ್ ಮತ್ತು ರಾಮನಗರಕ್ಕೆ ತೆರಳಲಿದೆ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

Join Whatsapp