ಸೌದಿ ಸರ್ಕಾರಿ ಸಿಬ್ಬಂದಿಗೆ ಹಜ್ ಗೆ ಅವಕಾಶವಿಲ್ಲ, ಯಾತ್ರಾರ್ಥಿಗಳ ಸಂಖ್ಯೆ ಭಾರೀ ಕಡಿತ

Prasthutha|

ಕೈರೊ : ಕೊರೋನಾ ವೈರಸ್ ಸೋಂಕಿನ ಹರಡುವಿಕೆ ಭೀತಿಯಿಂದ ಯಾವುದೇ ಸರ್ಕಾರಿ ಸಿಬ್ಬಂದಿ ಅಥವಾ ಯಾತ್ರಾರ್ಥಿಗಳ ಸೇವೆಯಲ್ಲಿ ನಿರತರಾಗಿರುವವರು ಈ ವರ್ಷದ ಹಜ್ ಯಾತ್ರೆ ನಿರ್ವಹಿಸುವಂತಿಲ್ಲ ಎಂದು ಸೌದಿ ಆಡಳಿತ ನಿರ್ಣಯಿಸಿದೆ. ಆದರೆ, ಯಾತ್ರಾರ್ಥಿಗಳನ್ನು ಕರೆದೊಯ್ಯುವ ಸೇವೆಯಲ್ಲಿ ನಿರತರಾಗಿರುವವರು ತಮ್ಮ ಸೇವೆ ನಿರ್ವಹಿಸುತ್ತಾರೆ. ಈ ಬಗ್ಗೆ ಹಜ್ ಸಚಿವ ಉಮ್ರಾಹ್ ಮುಹಮ್ಮದ್ ಸಲೆಹ್ ಬಿನ್ ತಾಹಿರ್ ಬೆಂತೆನ್ ಮಾಹಿತಿ ನೀಡಿದ್ದಾರೆ.

- Advertisement -

ಈ ವರ್ಷ ತುಂಬಾ ಕಡಿಮೆ ಸಂಖ್ಯೆಯ ಸದಸ್ಯರಿಗೆ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸೌದಿ ಅರೇಬಿಯಾ ಕಳೆದ ತಿಂಗಳು ಘೋಷಿಸಿತ್ತು. ಯಾತ್ರಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲಾಗಿದೆ. ಯಾತ್ರಾರ್ಥಿಗಳ ಆಯ್ಕೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕಟ್ಟುನಿಟ್ಟಿನ ಆರೋಗ್ಯ ನಿಯಮಗಳೊಂದಿಗೆ ವಿಶಿಷ್ಟ ಕಾರ್ಯತಂತ್ರಗಳ ಯೋಜನೆಯನ್ನು ಈ ವರ್ಷದ ಹಜ್ ಯಾತ್ರೆಗೆ ರೂಪಿಸಲಾಗಿದೆ ಎಂದು ಬೆಂತೆನ್ ಹೇಳಿದ್ದಾರೆ. ಈ ವರ್ಷದ ಹಜ್ ಯಾತ್ರೆಯಲ್ಲಿ ಶೇ.70ರಷ್ಟು ವಿದೇಶಿಗರು ಮತ್ತು ಶೇ.30ರಷ್ಟು ಸೌದಿ ನಿವಾಸಿಗಳಿಗೆ ಮಾತ್ರ ಅವಕಾಶವಿದೆ. ವಿದೇಶಿ ಯಾತ್ರಿಗಳು ಆರೋಗ್ಯ ಸಂಬಂಧಿತ ಷರತ್ತುಗಳನ್ನು ಪೂರೈಸಿರಲೇಬೇಕು. ಅದರಲ್ಲೂ ಕೊರೋನಾ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಇರಲೇಬಾರದು. ಕೊರೋನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿರಬೇಕು. ಈ ಹಿಂದೆ ಹಜ್ ಯಾತ್ರೆ ನಿರ್ವಹಿಸಿರಬಾರದು, 20ರಿಂದ 50 ವರ್ಷದೊಳಗಿನವರಾಗಿರಬೇಕು. ಹಜ್ ಯಾತ್ರೆ ನಿರ್ವಹಿಸಿದ ಮೊದಲು ಮತ್ತು ನಂತರ ಕ್ವಾರಂಟೈನ್ ಅವಧಿ ಪೂರೈಸಲು ಬದ್ಧವಾಗಿರುವ ಬಗ್ಗೆ ಸಹಿ ಮಾಡಬೇಕು ಮುಂತಾದ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

- Advertisement -

ಸೌದಿಯಿಂದ ಆಯ್ಕೆಯಾಗುವ ಶೇ.30 ಮಂದಿಯಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ವೈದ್ಯಕೀಯ ಸೇವಾ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿಗೆ ಹೆಚ್ಚಿನ ಆದ್ಯತೆಯಿದೆ. ಈ ಕುರಿತ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಮೊದಲ ಯಾತ್ರಾರ್ಥಿ ತಂಡ ಶುಕ್ರವಾರ ಸಂಜೆ ಜೆದ್ದಾದ ದೊರೆ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.



Join Whatsapp