ಮುಂಬೈ: ನಟ ಸುಶಾಂತ್ ಸಿಂಗ್ ರಾಜಪೂತ್ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಇದೀಗ ಸಹಾಯಕ ನಿರ್ದೇಶಕ ರಿಷಿಕೇಶ್ ಪವಾರ್ನನ್ನು ಬಂಧಿಸಿದೆ. ಸುಶಾಂತ್ ಸ್ನೇಹಿತರಾಗಿದ್ದ ಪವಾರ್, ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದನು.
2020ರ ಜೂನ್ 14 ರಂದು ಸುಶಾಂತ್ ಸಿಂಗ್, ತಮ್ಮ ಮುಂಬೈ ನಿವಾಸದಲ್ಲಿ ಅನುಮಾನಾಸ್ಪದ ವಾಗಿ ಸಾವಿಗೀಡಾಗಿದ್ದರು. ಸೆಪ್ಟೆಂಬರ್ನಲ್ಲಿ ಸುಶಾಂತ್ನ ಅಡಿಗೆಯವನನ್ನು ವಿಚಾರಣೆ ಮಾಡುವಾಗ ಪವಾರ್ ಹೆಸರು ಬಹಿರಂಗಗೊಂಡಿತ್ತು.
ಬಂಧನದ ಭೀತಿಯಿಂದ ಪವಾರ್ ನಿರೀಕ್ಷಣಾ ಜಾಮೀನಿಗಾಗಿ ಮುಂಬೈ ಸೆಷನ್ಸ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದನು. ಕಳೆದ ತಿಂಗಳು ನ್ಯಾಯಾಲಯ ಜಾಮೀನು ನಿರಾಕರಿಸಿದಾಗ ಪೊಲೀಸರು ಚೆಂಬೂರ್ನಲ್ಲಿರುವ ಪವಾರ್ ಮನೆಗೆ ದಾಳಿ ಮಾಡಿದಾಗ ನಾಪತ್ತೆಯಾಗಿದ್ದನು. ಪವಾರ್ನ ಕೆಲವು ಗ್ಯಾಜೆಟ್ಗಳನ್ನು ವಶಪಡಿಸಿಕೊಂಡು ಹುಡುಕಾಟ ನಡೆಸಿದ್ದ ಪೊಲೀಸರು ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಶಾಂತ್ ಸಿಂಗ್ ನೊಂದಿಗೆ ಕೆಲಸ ಮಾಡುವಾಗ ಪವಾರ್ ಅವನಿಗೆ ಡ್ರಗ್ಸ್ ಪೂರೈಸುತ್ತಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಶಾಂತ್ ಸಿಂಗ್ ನಿಗೂಢ ಸಾವಿನ ಪ್ರಕರಣದಲ್ಲಿ ಪೊಲೀಸರು ಈವರೆಗೂ 29 ಜನರನ್ನು ಬಂಧಿಸಿದ್ದಾರೆ. ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸೋದರ ಶೋವಿಕ್ರನ್ನು ಕೂಡ ಬಂಧಿಸಲಾಗಿದ್ದು, ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.