ಸುರತ್ಕಲ್ ನಗರಕ್ಕೆ ಸಾವರ್ಕರ್ ಹೆಸರಿಡುವ ಪ್ರಸ್ತಾಪ ಸಲ್ಲಿಸಿದ ಶಾಸಕ ಭರತ್ ಶೆಟ್ಟಿ ನಡೆ ಖಂಡನೀಯ: SDPI

Prasthutha|

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ನಗರಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರನ್ನು ಇಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸುವ ಮೂಲಕ ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ ಎಚ್ಚರಿಸಿದ್ದಾರೆ

- Advertisement -

  ಕಳೆದ ಮೂರೂವರೆ ವರ್ಷಗಳಿಂದ ಶಾಸಕರಾಗಿರುವ ಭರತ್ ಶೆಟ್ಟಿ ಜನಪರವಾದ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ , ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದೇ ತನ್ನ ಶಾಸಕ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಬ್ರಿಟಿಷರಿಗೆ 25 ಕ್ಕೂ ಹೆಚ್ಚು ಕ್ಷಮಾಪಣೆ ಪತ್ರಗಳನ್ನು ಬರೆದು, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ ಬ್ರಿಟಿಷರ ಗುಲಾಮನಾಗಿ ಕಾರ್ಯ ನಿರ್ವಹಿಸಿದ ಹಿಂದುತ್ವದ ಪ್ರತಿಪಾದಕ  ಸಾವರ್ಕರ್ ಹೆಸರನ್ನು ನಗರಕ್ಕೆ ಇಡುವ ಪ್ರಸ್ತಾವನೆ ಸಲ್ಲಿಸುವ ಮೂಲಕ ಶಾಸಕರು ಅನಗತ್ಯ ವಿವಾದಗಳನ್ನು ಉಂಟುಮಾಡಿ ಕ್ಷೇತ್ರದ ಜನರ ದಿಕ್ಕು ತಪ್ಪಿಸಲು ಕೆಲಸವನ್ನು ಮಾಡುತ್ತಿದ್ದಾರೆ. ಇದು ಶಾಸಕ ಸ್ಥಾನಕ್ಕೆ ಗೌರವ ತರುವ ಕೆಲಸವಲ್ಲ, ನಿಮ್ಮನ್ನು ಶಾಸಕರಾಗಿ ಕ್ಷೇತ್ರದ ಜನ ಆಯ್ಕೆ ಮಾಡಿದ್ದು ಊರಿನ ಹೆಸರು ಬದಲಾಯಿಸಲು ಅಲ್ಲ ನಾಡಿನ ಅಭಿವೃದ್ಧಿ ಮಾಡಲು ಎಂಬುದು ಶಾಸಕರು ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

   ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ನಗರ ಹಾಗೂ ಗಲ್ಲಿಗಳ ಹೆಸರು ಬದಲಾಯಿಸುವ ಸಂಘಪರಿವಾರದ ಹಿಡನ್ ಅಜೆಂಡಾವನ್ನು ವಿದ್ಯಾವಂತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಉಪಯೋಗಿಸಲು ಹೊರಟರೆ SDPI ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಹಾಗೂ ಜಿಲ್ಲೆಯ ನಾಗರಿಕರು ಹಾಗೂ ಇತರ ಸಂಘಟನೆಗಳ ಜೊತೆಸೇರಿ ತೀವ್ರವಾದ ಹೋರಾಟಗಳನ್ನು ಮಾಡಲಿದ್ದೇವೆ, ಅದೇರೀತಿ  ಶಾಸಕರು ಕೊಟ್ಟ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಆಡಳಿತವು ತಿರಸ್ಕಾರ ಮಾಡಿ ಸಂವಿಧಾನಕ್ಕೆ ಗೌರವ ಕೊಡಬೇಕು, ಮಂಗಳೂರು ನಗರ ಪ್ರದೇಶಗಳಲ್ಲಿ ಬಹಳಷ್ಟು ಸಮಸ್ಯೆಗಳಿರುವಾಗ ಅದನ್ನು ಪರಿಹರಿಸಲು ಪಾಲಿಕೆ ವಿಶೇಷ ಗಮನ ಹರಿಸಬೇಕು. ಇದಕ್ಕೆ ಯಾವತ್ತೂ ನಮ್ಮ ಬೆಂಬಲವಿದೆ. ಅದಲ್ಲದೇ ಪ್ರಾಧಿಕಾರದಲ್ಲಿ ತಮಗೆ  ಬಹುಮತವಿದೆ ಎಂಬ ಉದ್ಧಟತನದಿಂದ  ಜನಸಾಮಾನ್ಯರಿಗೆ,ನಾಡಿಗೆ  ಯಾವುದೇ ಪ್ರಯೋಜನವಿಲ್ಲದ  ಅನಗತ್ಯ ವಿಚಾರಗ ಬಗ್ಗೆ ನಿರ್ಣಯ ಮಂಡಿಸಲು ಹೊರಟರೆ ಅದಕ್ಕೆ ಯಾವುದೇ ಕಾರಣಕ್ಕೂ ನಾವು  ಅವಕಾಶ ನೀಡುವುದಿಲ್ಲ. ಸಂವಿಧಾನಾತ್ಮಕವಾದ ಪ್ರತಿರೋಧವನ್ನು ಎದುರಿಸ ಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.

- Advertisement -

  ಕೋಮುಸೂಕ್ಷ್ಮ  ಪ್ರದೇಶವಾದ ಸುರತ್ಕಲ್ ಸದ್ಯ ಹಲವಾರು ವರ್ಷಗಳಿಂದ ಶಾಂತಿಯಿಂದ ಇದೆ. ಇಂತಹ ಕಡೆಗಳಲ್ಲಿ ಬಿಜೆಪಿಯವರು ಅಶಾಂತಿ  ಸೃಷ್ಟಿಸಲು ವ್ಯವಸ್ಥಿತ ಹುನ್ನಾರಗಳನ್ನು ನಡೆಸುತ್ತಿದೆ. ಇದಕ್ಕೆ ಜಿಲ್ಲಾಡಳಿತ, ಮತ್ತು ಮಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿ ಸಂವಿಧಾನ ಹಾಗೂ ಕಾನೂನಿಗೆ ಅಪಚಾರ ಎಸಗಬಾರದು  ಎಂದು SDPI ಆಗ್ರಹಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Join Whatsapp