ತಿರುವನಂತಪುರಂ: ಮೂರು ತಿಂಗಳ ಹಿಂದೆ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾದ ಸಿದ್ದೀಕ್ ಕಾಪ್ಪನ್ ರ ಬಿಡುಗಡೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಸ್ತಕ್ಷೇಪ ಮಾಡಬೇಕು ಎಂದು ಆಗ್ರಹಿಸಿ ಅವರ ಕುಟುಂಬವು ಕೇರಳ ಸರಕಾರದ ಸೆಕ್ರೆಟರಿಯೇಟ್ ಮುಂದೆ ಧರಣಿ ನಡೆಸಿದೆ.
“ನನ್ನ ಇಕ್ಕಾ (ಪತಿ) ಯಾವುದೇ ತಪ್ಪನ್ನು ಮಾಡಿಲ್ಲ; ಆದಾಗ್ಯೂ ಆತ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿದ್ದಾರೆ. ಕೇರಳ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತುಕತೆ ನಡೆಸಿ ನನ್ನ ಪತಿಯ ಬಿಡುಗಡೆಗೆ ದಾರಿಯನ್ನುಂಟುಮಾಡಬೇಕು” ಎಂದು ಕಾಪ್ಪನ್ ಪತ್ನಿ ರೈಹಾನ ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ತನ್ನ ಪತಿಗೆ ಚಿತ್ರಹಿಂಸೆ ನೀಡಿದ್ದು, ಈ ಸಂಕಷ್ಟದಿಂದ ಪಾರಾಗಬೇಕಾದರೆ ಯಾವುದಾದರೂ ಸಿ.ಪಿ.ಐ (ಎಂ) ನಾಯಕನ ಹೆಸರು ಹೇಳುವಂತೆ ಅವರನ್ನು ಒತ್ತಾಯಿಸಿದ್ದಾರೆ ಎಂದು ಕಾಪ್ಪನ್ ರ ಪತ್ನಿ ರೈಹಾನ (37) ಹೇಳಿದ್ದಾರೆ.
ಯಾಕಾಗಿ ರಾಹುಲ್ ಗಾಂಧಿ ನಮ್ಮ ಮನೆಗೆ ಭೇಟಿ ಕೊಟ್ಟರೆಂದು ಮತ್ತು ತಾನು ದನದ ಮಾಂಸ ತಿನ್ನುತ್ತಿಯಾ ಎಂದು ಪೊಲಿಸರು ಕಾಪ್ಪನ್ ರನ್ನು ಕೇಳಿದ್ದಾರೆ ಎಂದು ರೈಹಾನ ಹೇಳಿದ್ದಾರೆ.
“ರಾಹುಲ್ ಗಾಂಧಿ ಯಾಕಾಗಿ ನಮ್ಮ ಮನೆಗೆ ಭೇಟಿ ನೀಡಿದರೆಂದು ಮತ್ತು ಕಾಪ್ಪನ್ ಬೀಫ್ ತಿನ್ನುತ್ತಾರೆಯೇ ಎಂದು ಅವರು ಕೇಳಿದ್ದಾರೆ. ಅವರಿಗೆ 100 ಕೋಟಿ ಮೌಲ್ಯದ ಆಸ್ತಿಯಿದೆ ಎಂದು ಅವರು ಆರೋಪಿಸಿದ್ದಾರೆ. ನಮ್ಮ ಮನೆಯನ್ನು ನೋಡಿರಿ, ನಮ್ಮಲ್ಲಿ ಎಷ್ಟಿದೆಯೆಂದು ಎಲ್ಲರಿಗೂ ತಿಳಿಯುತ್ತದೆ” ಎಂದು ಅವರು ಹೇಳಿದ್ದಾರೆ.
ಇದು ರಾಜ್ಯದ ಹೊರಗಿನ ವಿಷಯವಾದ ಕಾರಣ ಇದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದು ಸಾಧ್ಯವಿಲ್ಲವೆಂದು ಕೇರಳ ಮುಖ್ಯಮಂತ್ರಿ ಹೇಳಿರುವುದಾಗಿ ಕಾಪ್ಪನ್ ಸಹೋದರ ಹಂಝಾ ತಿಳಿಸಿದ್ದಾರೆ.
“ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಕೋರಿ ನಾವು ಪತ್ರವೊಂದನ್ನು ಬರೆದಿದ್ದೆವು. ಇದು ರಾಜ್ಯದ ಹೊರಗಿನ ವಿಷಯವಾದ್ದರಿಂದ ಸರಕಾರ ಮಧ್ಯಪ್ರವೇಶ ಮಾಡುವುದು ಸಾಧ್ಯವಿಲ್ಲವೆಂಬ ಉತ್ತರ ನಮಗೆ ದೊರಕಿತು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಲು ಧರಣಿಯನ್ನು ನಡೆಸಲಾಗುತ್ತಿದೆ. ನಾವು ಪಡೆಯಲಿದ್ದೇವೆ ಎಂಬ ಭರವಸೆ ಇದೆ. ನಾವು ಪ್ರತಿಯೋರ್ವರನ್ನೂ ಕೋರುತ್ತಿದ್ದೇವೆ. ಅವರು (ದಿಲ್ಲಿ ಪೊಲೀಸ್) ಈ ವಿಷಯದಲ್ಲಿ ಯಾವುದೇ ಪುರಾವೆಯನ್ನು ಪ್ರಸ್ತುತ ಪಡಿಸಿಲ್ಲ” ಎಂದು ಕಾಪ್ಪನ್ ರ ಹಿರಿಯ ಸಹೋದರ ಹಂಝಾ ಹೇಳಿದ್ದಾರೆ.