ವಿಜಯಪುರ: ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿಎಂ, “ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು” ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳು ಹೃದಯಹೀನರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.
ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.