ನವದೆಹಲಿ: ‘ದೇಶದ ಸಂವಿಧಾನವು ಸಂಘದ ನಿಯಮ ಪುಸ್ತಕವಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡಿಲ್ಲ’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಇಂದು (ಶುಕ್ರವಾರ) ಸಂವಿಧಾನದ ವಿಷಯದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ನಾಶಗೊಳಿಸಲು ತನ್ನಿಂದ ಸಾಧ್ಯವಾಗುವ ಎಲ್ಲವನ್ನು ಮಾಡಿದೆ’ ಎಂದು ಆರೋಪಿಸಿದ್ದಾರೆ.
‘ಸಂಭಲ್ ಮತ್ತು ಮಣಿಪುರ ಹಿಂಸಾಚಾರ ವಿಷಯದಲ್ಲಿ ಮೌನ ತಾಳಿರುವ ಪ್ರಧಾನಿ ಮೋದಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
‘ದೇಶದ ಸಂವಿಧಾನವು ಸಂಘದ ನಿಯಮ ಪುಸಕ್ತವಲ್ಲ ಎಂಬುದನ್ನು ಪ್ರಧಾನಿ ಮೋದಿ ಅರ್ಥಮಾಡಿಕೊಂಡಿಲ್ಲ’ ಎಂದು ಅವರು ಟೀಕಿಸಿದ್ದಾರೆ.
ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾ ಕವಚವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.