ಶ್ವೇತಭವನದ ಪ್ರಮುಖ ಹುದ್ದೆಗೆ ಕಾಶ್ಮೀರ ಮೂಲದ ಸಮೀರಾ ಫಾಝಿಲಿ ನೇಮಕ

Prasthutha|

ಭಾರತೀಯ ಮೂಲದ ಅಮೆರಿಕನ್ ಸಮೀರಾ ಫಾಝಿಲಿ ಅವರನ್ನು ಅಮೆರಿಕದ ಶ್ವೇತಭವನದ ಪ್ರಮುಖ ಹುದ್ದೆಯಾದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ನೂತನ ಅಮೆರಿಕದ ಚುನಾಯಿತ ಅಧ್ಯಕ್ಷ ಜಿಯೋ ಬೈಡನ್ ಅವರು ಈ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಮೆರಿಕದ ಅಧ್ಯಕ್ಷರಿಗೆ ಆರ್ಥಿಕ ಸಲಹೆ ಮತ್ತು ಆರ್ಥಿಕ ನೀತಿಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಮನ್ವಯತೆ ಸಾಧಿಸುವುದು ರಾಷ್ಟ್ರೀಯ ಆರ್ಥಿಕ ಮಂಡಳಿಯ ಕೆಲಸವಾಗಿದೆ.
ಸಮೀರಾ ಅವರು ಪ್ರಸ್ತುತ ಜಿಯೋ ಬೈಡನ್ –ಕಮಲಾ ಹ್ಯಾರಿಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ತಂಡದ ಆರ್ಥಿಕ ವಿಭಾಗದಲ್ಲಿದ್ದಾರೆ. ಈ ಹಿಂದೆ ಅವರನ್ನು ಅಟ್ಲಾಂಟಾದ ಫೆಡರಲ್ ರಿಸರ್ವ್ ಬ್ಯಾಂಕ್ ಗೆ ನೇಮಿಸಲಾಗಿತ್ತು.
ಸಮೀರಾ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಅಲಂಕರಿಸುವ ಎರಡನೇ ಕಾಶ್ಮೀರ ಮೂಲದ ಭಾರತೀಯ-ಅಮೆರಿಕನ್ ಆಗಿದ್ದಾರೆ. ಡಿಸೆಂಬರ್ ನಲ್ಲಿ ಕಾಶ್ಮೀರ ಮೂಲದ ಭಾರತೀಯ ಅಮೆರಿಕನ್ ಆಯಿಶಾ ಶಾ ಅವರನ್ನು ಶ್ವೇತಭವನ ಕಚೇರಿಯ ಡಿಜಿಟಲ್ ಕಾರ್ಯತಂತ್ರದ ಸಹಭಾಗಿತ್ವ ನಿರ್ವಾಹಕಿಯಾಗಿ ನೇಮಿಸಲಾಗಿತ್ತು.
ಒಬಾಮಾ-ಬಿಡೆನ್ ಸರ್ಕಾರದಲ್ಲಿ ಸಮೀರಾ ಅವರು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಹಿರಿಯ ನೀತಿ ಸಲಹೆಗಾರರಾಗಿ ಮತ್ತು ದೇಶೀಯ ಹಣಕಾಸು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳೆರಡರಲ್ಲೂ ಯುಎಸ್ ಖಜಾನೆ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ಅದಕ್ಕೂ ಮೊದಲು ಸಮೀರಾ, ಯೇಲ್ ಕಾನೂನು ಶಾಲೆಯಲ್ಲಿ ಕಾನೂನು ಉಪನ್ಯಾಸಕರಾಗಿದ್ದರು. ಮೂಲತಃ ಬಫಲೋ ಮೂಲದ ಸಮೀರಾ ಈಗ ಜಾರ್ಜಿಯಾದಲ್ಲಿ ತನ್ನ ಪತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ. ಸಮೀರಾ ಯೇಲ್ ಲಾ ಸ್ಕೂಲ್ ಮತ್ತು ಹಾರ್ವರ್ಡ್ ಕಾಲೇಜಿನ ಪದವೀಧರರಾಗಿದ್ದಾರೆ.



Join Whatsapp