ಬೆಂಗಳೂರು: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣವನ್ನು ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಶಾಸಕ ಸ್ಥಾನದಿಂದ ಕೆಳಗಿಳಿಸಲು ಡಿಕೆ ಸಹೋದರರು ನಡೆಸಿರುವ ಷಡ್ಯಂತ್ರವಿದು ಎಂದು ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ದಿನನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ ಎಂದು ಹೇಳಿದೆ.
ಕೆಲವೇ ದಿನಗಳ ಹಿಂದೆ ಶಕ್ತಿಸೌಧದೊಳಗೆ ರೌಡಿಗಳನ್ನು ಒಳಬಿಟ್ಟು ಪರಿಷತ್ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ಜನಪ್ರತಿನಿಧಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಗತಿಯೇನು? ಸರ್ಕಾರಿ ಪ್ರಾಯೋಜಿತ ಹಲ್ಲೆ, ದಾಳಿಗಳ ಮೂಲಕ ದ್ವೇಷದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಾಗ್ದಾಳಿ ನಡೆಸಿದೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಶಾಸಕ ಸ್ಥಾನದಿಂದ ಕೆಳಗಿಳಿಸಲು ಡಿಕೆ ಸಹೋದರರ ಷಡ್ಯಂತ್ರ ರೂಪಿಸಿದ್ದಾರೆಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿರುವ ಗೂಂಡಾಗಳು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಶ್ರೀ ಸಿ.ಟಿ ರವಿ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿರುವ ಸರ್ಕಾರದ ಧೋರಣೆಯಿಂದ ಪ್ರೇರಣೆ ಪಡೆದಿರುವ ಕಾಂಗ್ರೆಸ್ ಗೂಂಡಾಗಳು ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಹ್ಯೇಯಕರ ಹಾಗೂ ಖಂಡನೀಯ ಎಂದು ಹೇಳಿದ್ದಾರೆ.