ವಿಪಕ್ಷ ನಾಯಕರಾದರೇ ನೀವೇನು ಸರ್ವಾಧಿಕಾರಿಯೇ? ನೀವು ಹೇಳುವ ‘ಹಿಂದುತ್ವ’ ಇದೇನಾ? ಮನುಸ್ಮೃತಿಯ ಪ್ರಭಾವವೇ?: ಕಾಂಗ್ರೆಸ್ ಟೀಕೆ

Prasthutha|

- Advertisement -

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ನಡು ರಸ್ತೆಯಲ್ಲಿ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುವುದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ, ನೀನು ಜನ್ಮ ಪೂರ್ತಿ ನೆನಪಿಟ್ಟುಕೊಳ್ಳಬೇಕು ಹಾಗ್ ಮಾಡ್ತೀನಿ, ನಿನ್ನ ಜನ್ಮ ಜಾಲಾಡ್ಬಿಡ್ತೀನಿ.. ಎಂದೆಲ್ಲಾ ನಡು ರಸ್ತೆಯಲ್ಲಿ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುವುದು ಬಿಜೆಪಿ ಮನಸ್ಥಿತಿಯನ್ನು ಎತ್ತಿ ತೋರುತ್ತಿದೆ.

- Advertisement -

ಅಶೋಕ್ ಅವರೇ ವಿಪಕ್ಷ ನಾಯಕರಾದ ಕೂಡಲೇ ನೀವೇನು ಸರ್ವಾಧಿಕಾರಿಯೇ? ಸಾಂವಿಧಾನಿಕ ಕಾನೂನು ಉಲ್ಲಂಘನೆ ಮಾಡಿ ಏನು ಬೇಕಾದರೂ ದುರ್ವರ್ತನೆ ತೋರಬಹುದೇ? ಬಾಯಿಬಿಟ್ಟರೆ ಅ…ನ್, ಅ…ನ್ ಎನ್ನುವ ಬಿಜೆಪಿ ನಾಯಕರ ನಾಲಿಗೆ ಒಬ್ಬರಿಗಿಂತ ಒಬ್ಬರದ್ದು ಉದ್ದವಾಗಿದೆ. ಹೆಣ್ಣು ಮಕ್ಕಳ ವಿಚಾರವೆಂದರೆ ಸಾಕು ಅತ್ಯಂತ ತುಚ್ಛವಾಗಿ ನಿಂದಿಸಲು ಹೊರ ಚಾಚುತ್ತಾರೆ!

ಮೊನ್ನೆ ಮೊನ್ನೆಯಷ್ಟೇ ಪರಿಷತ್ ಕಲಾಪದಲ್ಲಿ ಸಿ.ಟಿ ರವಿ ಮಹಿಳಾ ಸಹೋದ್ಯೋಗಿಯನ್ನು ಅವಾಚ್ಯವಾಗಿ ನಿಂದಿಸಿ ಹೆಣ್ಣು ಕುಲಕ್ಕೆ ಅಪಮಾನ, ದಲಿತರನ್ನು ನಿಂದಿಸಿ, ಒಕ್ಕಲಿಗ ಹೆಣ್ಣು ಮಗಳನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ, ಅಧಿಕಾರದ ಮದವೇರಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಈ ಹಿಂದೆ ಬ್ಯಾರಿಕೇಡ್ ನೂಕಿ ಪೊಲೀಸರ ಮೇಲೆ ದೌರ್ಜನ್ಯ,

ಅರಗ ಜ್ಞಾನೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಪೊಲೀಸರಿಗೆ ಬೆದರಿಕೆ ಹಾಕಿದ್ದರು. ಬಿಜೆಪಿ ಶಾಸಕ ಹರೀಶ್ ಪೂಂಜಾ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಅವಾಚ್ಯವಾಗಿ ಬೈದು ಕ್ರೌರ್ಯತನ ಮೆರೆದಿದ್ದರು. ಈಗ ಈ ಸಾಲಿಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಕೂಡ ಹೊಸದಾಗಿ ಸೇರ್ಪಡೆಯಾಗಿರುವುದು ದುರಂತ ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿಗರೇ, ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ನಿಮ್ಮ ತಾಯಿಯು ಹೆಣ್ಣು, ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಂಸಾರ ನಿಭಾಯಿಸುವ ನಿಮ್ಮ ಹೆಂಡತಿಯೂ ಕೂಡ ಹೆಣ್ಣು. ಮಹಿಳೆಯರ ಬಗ್ಗೆ ಪದೇ ಪದೇ ಹೊಲಸು ನಾಲಿಗೆ ಹರಿಬಿಡುವ ನೀವುಗಳು ರಾಜ್ಯದ ಮಹಿಳೆಯರ ಮುಂದೆ ಮಂಡಿಯೂರಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಮಹಿಳೆಯರ ಬಗ್ಗೆ ಬಿಜೆಪಿ ನಾಯಕರಿಗೆ ಎಂತಹಾ ಭಾವನೆ ಇದೆ ಎಂಬುದಕ್ಕೆ ಅವರ ನಾಲಗೆಯೇ ಸಾಕ್ಷಿ ಹೇಳುತ್ತಿದೆ, ಪರಿಷತ್ ಕಲಾಪದಲ್ಲೇ ಮಹಿಳಾ ಸಚಿವರನ್ನು ಅವಾಚ್ಯವಾಗಿ ನಿಂಧಿಸಿದ ಸಿ.ಟಿ ರವಿ ನಂತರ ನಂತರ ಈಗ ವಿಪಕ್ಷ ನಾಯಕ ಆರ್ ಅಶೋಕ್ ತನ್ನ ನಾಲಗೆ ಹರಿಬಿಟ್ಟು ‘ಸ್ತ್ರೀ ಕುಲ’ವನ್ನು ಅಪಮಾನಿಸಿದ್ದಾರೆ‌. ನೀವು ಹೇಳುವ ‘ಹಿಂದುತ್ವ’ ಇದೇನಾ? ಅಥವಾ ಮನುಸ್ಮೃತಿಯ ಪ್ರಭಾವವೇ ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.



Join Whatsapp