ಬೆಂಗಳೂರು: ವಕ್ಫ್ ಬೋರ್ಡ್ ಅನುದಾನದ ಅವ್ಯವಹಾರಕ್ಕೆ ಸಂಬಂಧಿಸಿ ಬೋರ್ಡ್ ಸದಸ್ಯ ಶಾಫಿ ಸಅದಿ ವಿರುದ್ಧ ಕ್ರಮಕೈಗೊಳ್ಳುವ ಕುರಿತು ನಿಲುವು ಸ್ಪಷ್ಪಪಡಿಸುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಶಾಫಿ ಸಅದಿ ಅವರು ವಕ್ಫ್ ಬೋರ್ಡ್ ಸದಸ್ಯರಾಗಿದ್ದುಕೊಂಡು ತಮ್ಮ ನೇತೃತ್ವದ ಖಾಸಗಿ ಸಂಸ್ಥೆಯ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಅನುದಾನ ಪಡೆದುಕೊಂಡಿದ್ದು, ಇದು ಸ್ವಜನಪಕ್ಷಪಾತವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಾದ ವಿವಾದ ಆಲಿಸಿದ ಬಳಿಕ, ಶಾಫಿ ಸಅದಿ ವಿರುದ್ಧ ಕರ್ನಾಟಕ ವಕ್ಫ್ ಬೋರ್ಡ್ ಕಾಯ್ದೆ 1995ರ ಸೆಕ್ಷನ್ 20 (1) (ಬಿ)ಯಡಿ ಕ್ರಮ ಕೈಗೊಳ್ಳಬಹುದೇ ಎಂಬುದರ ಬಗ್ಗೆ ಸರ್ಕಾರದ ನಿಲುವು ಏನು ಎಂದು ಮುಖ್ಯ ನಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.
1995ರ ಸೆಕ್ಷನ್ 20 (1) (ಬಿ)ಯಡಿ ಯಾವುದೇ ವ್ಯಕ್ತಿ ವಕ್ಫ್ ಬೋರ್ಡ್ ಸದಸ್ಯನಾಗಿದ್ದುಕೊಂಡು ವಕ್ಫ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಅವರನ್ನು ಶೋಕಾಸ್ ನೋಟಿಸ್ ನೀಡಿ ಆ ಸ್ಥಾನದಿಂದ ವಜಾಗೊಳಿಸಬಹುದು ಎಂದು ವಕ್ಫ್ ಕಾಯ್ದೆ ಹೇಳುತ್ತದೆ.
ಶಾಫಿ ಸಅದಿ ಅವರು ಮಂಡಳಿಯ ಸದಸ್ಯರಾಗಿದ್ದುಕೊಂಡು, ತಮ್ಮ ನೇತೃತ್ವದ ಸಂಸ್ಥೆಯೊಂದಕ್ಕೆ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಇದು ಅಧಿಕಾರ ದುರ್ಬಳಕೆಯಾಗಿದೆ. ಆ ಸಂಸ್ಥೆಗೆ ಈಗಾಗಲೇ ಕಾಂಪೌಂಡ್ ಇದ್ದರೂ ಮತ್ತೆ ಅದಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದು ವಕ್ಫ್ ಹಿತಾಸಕ್ತಿಗೆ ಮತ್ತು ವಕ್ಫ್ ಕಾಯ್ದೆಗೆ ವಿರುದ್ಧವಾದುದು ಎಂದು ಅರ್ಜಿದಾರ ಅನ್ವರ್ ಮಾಣಿಪ್ಪಾಡಿ ಪರ ವಕೀಲ ಶ್ರೀಧರ ಪ್ರಭು ವಾದಿಸಿದರು.
ಆಗ ಮುಖ್ಯ ನ್ಯಾಯಮೂರ್ತಿಯವರು, ಹಾಗಾದರೆ ವಕ್ಫ್ ಕಾಯ್ದೆಯಡಿ ಕ್ರಮಕೈಗೊಳ್ಳುವ ಬಗ್ಗೆ ನಿಲುವು ತಿಳಿಸಿ ಎಂದು ಹೇಳಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದರು.
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಎನ್.ಕೆ.ಎಂ.ಶಾಫಿ ಸಅದಿ ಕಾರ್ಯದರ್ಶಿಯಾಗಿರುವ ‘ಸಅದಿಯ ಎಜ್ಯುಕೇಷನಲ್ ಫೌಂಡೇಷನ್’ ನ ಕಾಂಪೌಂಡ್ ಮತ್ತು ಇತರ ಕೆಲಸಗಳಿಗಾಗಿ ನಿಯಮಬಾಹಿರವಾಗಿ ವಕ್ಫ್ ಬೋರ್ಡ್ ನಿಂದ ಅನುದಾನ ಪಡೆಯಲಾಗಿದೆ. ಈಗಾಗಲೆ ಅಲ್ಲಿ ಕಾಂಪೌಂಡ್ ಇದ್ದರೂ ಹೊಸದಾಗಿ ನಿರ್ಮಿಸಿದ ರೀತಿಯಲ್ಲಿ ಅನುದಾನ ಪಡೆಯಲಾಗಿದೆ ಎಂದು ಅನ್ವರ್ ಮಾಣಿಪ್ಪಾಡಿ ಅರ್ಜಿಯಲ್ಲಿ ಆರೋಪಿಸಿದ್ದರು. ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅನ್ವರ್ ಮಾಣಿಪ್ಪಾಡಿ, “ಸತ್ಯಮೇವ ಜಯತೆ.. ಮಸೀದಿಯ ಕೆಲಸಗಳಿಗಾಗಿ ಸರ್ಕಾರಿ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಾಫಿ ಸಅದಿ ಲೂಟಿ ಮಾಡಿದ್ದಕ್ಕಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಆದೇಶದ ಪ್ರಕಾರ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯತ್ವದಿಂದ ವಜಾಗೊಳಿಸಬೇಕಾಗಿದೆ. ನ್ಯಾಯ ನೀಡಿದ ಸರ್ವಶಕ್ತನಿಗೆ ಧನ್ಯವಾದಗಳು!” ಎಂದು ಟ್ವೀಟ್ ಮಾಡಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ವಕ್ಫ್ ಬೋರ್ಡ್ ಗುರುವಾರ ಶಾಫಿ ಸಅದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.