ಲಖನೌ: ಹಲವು ತಿಂಗಳುಗಳ ಚರ್ಚೆಯ ನಂತರ ಉತ್ತರ ಪ್ರದೇಶ ವಿಧಾನಸಭೆ ಬುಧವಾರ ‘ಲವ್ ಜಿಹಾದ್’ ಎಂದು ಕರೆಯಲ್ಪಡುವ ‘ಕಾನೂನು ಬಾಹಿರ ಮತಾಂತರ ನಿಷೇಧ ಮಸೂದೆ 2021’ಕ್ಕೆ ಬುಧವಾರ ಅಂಗೀಕಾರ ನೀಡಿದೆ. ಈ ಮೂಲಕ ‘ಅಕ್ರಮ ಮತಾಂತರ ನಿಷೇಧ ಕಾಯ್ದೆ’ ಈಗ ಕಾನೂನಾಗಿ ಮಾರ್ಪಟ್ಟಿದೆ.
ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ನವೆಂಬರ್ 28ರಂದು ಈ ಮಸೂದೆಯನ್ನ ಜಾರಿಗೆ ತಂದಿದ್ದರು.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಂ ಯುವಕರನ್ನು ಗುರಿಯಾಗಿಸಿ ‘ಲವ್ ಜಿಹಾದ್’ ಕಾನೂನನ್ನು ಜಾರಿಗೆ ತರಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಉತ್ತರಪ್ರದೇಶದಲ್ಲಿ ಹಲವಾರು ಮುಸ್ಲಿಂ ಯುವಕರನ್ನು ಕಾನೂನು ಜಾರಿಗೊಳಿಸಿದ ಒಂದು ವಾರದೊಳಗೆ ಬಂಧಿಸಲಾಗಿತ್ತು. ಹಲವಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಲವಾರು ಮಂದಿಗೆ ಕಿರುಕುಳ ನೀಡಲಾಗಿದೆ, ಬೆದರಿಕೆಯೊಡ್ಡಲಾಗಿದೆ. ಸಂಘಪರಿವಾರ ಅನ್ಯಧರ್ಮೀಯ ಜೋಡಿಗಳನ್ನು ಬೆದರಿಸಲು ಈ ಕಾನೂನನ್ನು ವ್ಯಾಪಕ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ವರದಿಗಳಿವೆ.
ಉತ್ತರ ಪ್ರದೇಶದಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಕಿರುಕುಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಹಲವಾರು ಅಂತರ್ ಧರ್ಮೀಯ ಜೋಡಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಲು ಆರಂಬಿಸಿವೆ ಎಂದು ವರದಿಯೊಂದು ತಿಳಿಸಿದೆ.