ರೈತ ಚಳುವಳಿ ಎಂಬ ಅಗ್ನಿಪರ್ವತ

Prasthutha|

-ಸದ್ರುದ್ದೀನ್ ವಾಯಕ್ಕಾಡ್

- Advertisement -

ಕಬ್ಬಿಣದ ಬೃಹತ್ ಮುಳ್ಳಿನ ಬೇಲಿ, ಐದು ಸಾಲುಗಳಲ್ಲಿ ಎದ್ದು ನಿಂತ ಬ್ಯಾರಿಕೇಡ್, ಜನರಿಗೆ ಹಾರಿ ದಾಟಲು ಅಸಾಧ್ಯವಾದ ಆಳವಾದ ಟ್ರಂಜ್, ದೇಶದ ರಾಜಧಾನಿಯ ರಸ್ತೆಗಳಲ್ಲಿ ಸಿಮೆಂಟಿನಲ್ಲಿ ಅಳವಡಿಸಿದ ಚೂಪಾದ ಕಬ್ಬಿಣದ ಸರಳುಗಳು, ಶಸ್ತ್ರಾಸ್ತ್ರಗಳಿಂದ ಸಜ್ಜರಾದ ಅರೆ ಸೈನಿಕ ವಿಭಾಗ, ಪೊಲೀಸರು….ಯುದ್ಧಕ್ಕೆ ಸಮಾನವಾದ ದೆಹಲಿಯ ಈ ದೃಶ್ಯಗಳು, ಇದು ಶತ್ರು ದೇಶದ ದಾಳಿಯನ್ನು ಎದುರಿಸಲು ಸಿದ್ಧಗೊಂಡಿರುವುದಲ್ಲ. ತನ್ನದೇ ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯಲು ಈ ಎಲ್ಲಾ ಸಿದ್ಧತೆಗಳು. ಹೋರಾಟ ಮಾಡುವ ರೈತರನ್ನು ಬಗ್ಗು ಬಡಿಯಲು ಪೊಲೀಸರಿಗೆ ಕಬ್ಬಿಣದ ಲಾಠಿಯನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆ. ದೆಹಲಿಯ ತಿಕ್ರಿ, ಗಾಝಿಪುರ ಗಡಿ ಪ್ರದೇಶಗಳು, ರೈತರ ಹೋರಾಟಗಳ ಕೇಂದ್ರವಾದ ಸಿಂಘು ಮೊದಲಾದೆಡೆ ಸಿದ್ಧಗೊಂಡ ‘ರಕ್ಷಣಾ ವ್ಯವಸ್ಥೆಗಳು’ ಸಂಘರ್ಷಭರಿತವಾದ ಅಂತರಾಷ್ಟ್ರೀಯ ಗಡಿಗಳಿಗೆ ಸಮಾನವಾಗಿದೆ.

ಜನವಿರೋಧಿ ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿಗಳು ಕೈವಶಪಡಿಸಿದ ಸರ್ವಾಧಿಕಾರ ಹಾಗೂ ಪ್ರಭುತ್ವದ ಫ್ಯಾಶಿಸ್ಟ್ ಕ್ರಮಗಳು ಹೇಗೆ ಒಂದು ದೇಶವನ್ನು ಹಾಳು ಮಾಡಬಹುದು ಎಂಬುದಕ್ಕೆ ಇಂದು ಬಿಜೆಪಿ ಆಳುವ ಇಂಡಿಯಾ ಒಂದು ಪಾಠಪುಸ್ತಕವಾಗಿದೆ. ಪೌರತ್ವ ಪ್ರತಿಭಟನೆ ಮತ್ತು ರೈತರ ಹೋರಾಟವು ಅದರ ಮುಖ್ಯ ಅಧ್ಯಾಯಗಳಾಗಿವೆ. ದೇಶವನ್ನು ಧಾರ್ಮಿಕವಾಗಿ ವಿಭಜಿಸಿ, ಒಂದು ವಿಭಾಗವನ್ನು ದಾಸ್ಯತನಕ್ಕೆ ತಳ್ಳಲು ಮತ್ತು ಅವರನ್ನು ದೇಶಭ್ರಷ್ಟಗೊಳಿಸಲು ಪೌರತ್ವ ಕಾಯಿದೆ ತಿದ್ದುಪಡಿಯನ್ನು ತರಲಾಗಿತ್ತು. ಆ ಬಳಿಕ ಬಾಕಿ ಉಳಿದವರಿಗೆ ಇಂಡಿಯಾ ಉಳಿದಿರುವುದೆಂದು ನಾವು ತಪ್ಪಾಗಿ ತಿಳಿದುಕೊಂಡಿದ್ದೇವೆ. ಕೃಷಿ ಕಾಯಿದೆ ತಿದ್ದುಪಡಿಗಳು ಆ ತಪ್ಪು ಗ್ರಹಿಕೆಯನ್ನು ಹೊಗಲಾಡಿಸುತ್ತದೆ. ಬಿಜೆಪಿಯ ಅಜೆಂಡಾ ಮುಸ್ಲಿಮ್ ಸಮುದಾಯವನ್ನು ಅಗ್ನಿಕುಂಡದಲ್ಲಿ ನಿಲ್ಲಿಸುವುದು ಮಾತ್ರವಲ್ಲ, ಮೂಲ ನಿವಾಸಿ ಜನವಿಭಾಗದ ಅಡಿಪಾಯವನ್ನು ಒಡೆಯುವುದೂ ಅವರ ಉದ್ದೇಶ ಎಂಬುದನ್ನು ಕೃಷಿ ಕಾಯಿದೆ ತಿದ್ದುಪಡಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಸ್ಪಷ್ಟಪಡಿಸುತ್ತದೆ. ಬಿಜೆಪಿಗೆ ಜನ್ಮ ನೀಡಿದ ಸಂಘಪರಿವಾರ ಕೇವಲ ಒಂದು ಧರ್ಮದ ಶತ್ರು ಮಾತ್ರವಲ್ಲ. ಅದು ಭಾರತದ ಮತ್ತು ಇಲ್ಲಿನ ಎಲ್ಲಾ ಜನವಿಭಾಗದ ಶತ್ರುವೂ ಆಗಿದೆ. ರೈತರ ಹೋರಾಟದ ವಿರುದ್ಧ ಪ್ರಭುತ್ವದ ಭಯೋತ್ಪಾದನೆಯು ಈ ವಿಚಾರವನ್ನು ಸಾಬೀತು ಪಡಿಸಿದೆ. ಆದರೆ ಧರ್ಮದ ಹೆಸರಿನಲ್ಲಿ ವಿಭಜಿಸಲಾಗದೆ, ಮಣ್ಣಿನಲ್ಲಿ ಕಾಯಕ ಮಾಡುವವನ ಇಚ್ಛಾಶಕ್ತಿಯ ಮುಂದೆ ಹಿಡಿತ ಸಾಧಿಸಲಾಗದೆ, ಫ್ಯಾಶಿಸ್ಟ್ ಕ್ರಮಗಳ ಮೂಲಕ ರೈತರ ಹೋರಾಟವನ್ನು ಸೋಲಿಸಬಹುದೆಂದು ಬಿಜೆಪಿ ಆಡಳಿತವು ಭಾವಿಸಿದೆ. ಚೀನಾದ ತಿಯನ್ಮಾನ್ ಚೌಕ ದೆಹಲಿಯಲ್ಲಿ ಪುನರಾವರ್ತಿಸಲು ಸಂಘಪರಿವಾರ ಫ್ಯಾಶಿಸಂ ಹಿಂಜರಿಯದು.

- Advertisement -

ಭಾರತ ಯಾರ ಗಣರಾಜ್ಯ?

ಈ ದೇಶವು ಯಾರದು? ಪರಮಾಧಿಕಾರ ಜನರಿಗೆ ಸೀಮಿತ ವಾದ ಗಣರಾಜ್ಯ ವಾಸ್ತವದಲ್ಲಿ ಪ್ರಾಯೋಗಿಕವಾಗುವುದು ಯಾವಾಗ? ಕಾನೂನುಗಳು, ತಿದ್ದುಪಡಿಗಳು ಯಾರಿಗಾಗಿ? ಪ್ರಜಾಪ್ರಭುತ್ವ ಅರಳುವುದರ ಮತ್ತು ಅದು ಬಲವನ್ನು ಪಡೆಯುವುದರ ಪುರಾವೆಗಳೇನು? ಮುಂತಾದ ಪ್ರಶ್ನೆಗಳು ಮತ್ತಷ್ಟು ತೀಕ್ಷ್ಣವಾಗುವುದರ ಜತೆಗೆ ಧ್ವನಿ ಎತ್ತಬೇಕು. ಅವುಗಳಿಗೆ ಉತ್ತರವನ್ನು ಹುಡುಕಿ ದೇಶದ ರಾಜಧಾನಿಗೆ ಟ್ರಾಕ್ಟರ್ ಗಳನ್ನು ಓಡಬೇಕು. ಅವುಗಳ ಚಕ್ರಗಳಿಗೆ ಸಿಲುಕಿ ಫ್ಯಾಶಿಸಮ್‌ ನ ಬ್ಯಾರಿಕೇಡುಗಳನ್ನು ಒಡೆದು ಮುನ್ನುಗ್ಗಬೇಕು. ಶಾಹೀನ್‌ ಭಾಗ್ ಮತ್ತು ಸಿಂಘುಗಳು ಪುನರಾವರ್ತನೆಗೊಳ್ಳಬೇಕು. ಕೊನೆಗೆ ಜಾತಿವಾದಿ, ಬಂಡವಾಳಶಾಹಿ ಆರಾಧಕರೂ ಆಗಿರುವ ಪ್ರಭುತ್ವವು ಭಯಭೀತಿಯಿಂದ ಓಡಿ ಹೋಗಬೇಕು. ಆಗಲೇ ಜನರ ಪ್ರಜಾಪ್ರಭುತ್ವ ಜೀವಂತಿಕೆಯನ್ನು ಪಡೆಯುವುದು. ಪಾರ್ಲಿಮೆಂಟ್ ಮತ್ತು ವಿಧಾನಸೌಧಗಳ ಸಾಮಾಜಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಂಬಳವನ್ನು ಪಡೆಯುವ ಅಧಿಕಾರಿಗಳು ಹಾಗೂ ದೇಶದ ಅತ್ಯಂತ ದುರ್ಬಲನ ಧ್ವನಿಯೂ ಅವನ ಹೃದಯವೂ ಆದಾಗಲೇ ಗಣರಾಜ್ಯವು ಸಂವಿಧಾನದಲ್ಲಿರುವ ಅಕ್ಷರಗಳಿಂದ ನಗರಗಳ, ಗ್ರಾಮಗಳ ಅಂತರಾಳದ ಅನುಭವಗಳಾಗುವುದು. ಕಾನೂನು ರಚನಾ ಸಭೆಗಳ, ಸರಕಾರೀ ಕಛೇರಿಗಳ ಮತ್ತು ದೇಶದ ಬೀದಿಗಳ ಅಂತರ ಶೂನ್ಯವಾದಾಗ ಮಾತ್ರ ಪ್ರಜಾಪ್ರಭುತ್ವ ದೇಶ, ಸಾರ್ವಭೌಮ ಗಣರಾಜ್ಯ ಮೊದಲಾದ ಮುಖಚಹರೆಗಳು ಮೂಲಭೂತವಾಗಿ ಆಲಂಕಾರಿಕವಾಗಬಹುದು. ಇಲ್ಲದಿದ್ದಲ್ಲಿ ಅದೊಂದು ಅವಮಾನದ ಸಂಕೇತವಾಗಬಹುದು.

ಭಾರತ ದೇಶವು ಅಂತಹ ಒಂದು ಅವಮಾನದ ಸ್ಥಿತಿಯಲ್ಲಿದೆ. ದೇಶದ ಬೆನ್ನೆಲುಬಾದ ರೈತರು ಅಸ್ತಿತ್ವಕ್ಕಾಗಿ ಹೋರಾಟ ನಿರತವಾಗಿದೆ. ಯಾಕಾಗಿ ಅವರು ಹೋರಾಟ ನಿರತರಾಗಿದ್ದಾರೆ ಎಂದು ನಿಮಗೆ ಗೊತ್ತೆ? ನೇರವಾಗಿ ಹೇಳಬೇಕೆಂದರೆ ಮಣ್ಣು ಮತ್ತು ಅನ್ನದ ಮೇಲಿನ ಜನರ ಹಕ್ಕುಗಳು ಕೈಬಿಟ್ಟು ಹೋಗದಿರಲು ಅವರು ಹೋರಾಟ ನಡೆಸುತ್ತಿದ್ದಾರೆ. ಅದೇ ರೀತಿ ಶೋಷಕರಾದ ಬಂಡವಾಳಶಾಹಿ ಬಲಾಢ್ಯರಿಗೆ ದೇಶವನ್ನು ಒತ್ತೆ ಇಡದಿರಲು ಅವರು ಹೋರಾಟ ನಡೆಸುತ್ತಿದ್ದಾರೆ. ಕೃಷಿ ಭೂಮಿಗಳನ್ನು ಸಂಪೂರ್ಣ ತಮ್ಮ ಅಧೀನದಲ್ಲಿಟ್ಟುಕೊಂಡು ದಾಸ್ತಾನು ಕೇಂದ್ರಗಳಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟು, ಉಪವಾಸಕ್ಕೆ ಕೆಡವಿ ಕೊಂದು ಹಾಕಿದ ಪಾಳೇಗಾರಿಕೆಯ ಮರಳುವಿಕೆ ಬಂಡವಾಳಶಾಹಿ ರೂಪದಲ್ಲಿ ಮರುಕಳಿಸದಿರಲು ಅವರು ಹೋರಾಟ ನಡೆಸುತ್ತಿದ್ದಾರೆ.

ಗಣರಾಜ್ಯ ದಿನದಂದೆ ರೈತರು ದೇಶದ ರಾಜಧಾನಿಯಲ್ಲಿ ಹೋರಾಟ ರ್ಯಾಲಿಯನ್ನು ನಡೆಸಿರುವುದು ಐತಿಹಾಸಿಕವಾಗಿದೆ. ರಿಪಬ್ಲಿಕ್ ಎಂಬುದು ಲ್ಯಾಟಿನ್ ಭಾಷೆಯ ‘ರೆಸ್ ಪಬ್ಲಿಕ್’ ಎಂಬ ಪದದಿಂದ ಉಂಟಾದ ಪದವಲ್ಲ. ಅದು ‘ಸಾರ್ವಭೌಮತೆ ಜನರಲ್ಲಿ ನಿಕ್ಷಿಪ್ತವಾಗಿ ಜನರಿಂದ ಆರಿಸಲ್ಪಟ್ಟ ಪ್ರತಿನಿಧಿಗಳ ಮೂಲಕ ಆ ಪರಮಾಧಿಕಾರವನ್ನು ವಿನಿಯೋಗಿಸುವ’ ಆಡಳಿತ ಸಂಪ್ರದಾಯವಾಗಿದೆ. ದೇಶದ ಆದ್ಯತೆ ಜನರು ಮತ್ತು ಅವರ ಕ್ಷೇಮವಾಗಿದೆ. ಜನರಿಂದ ಆರಿಸಲ್ಪಟ್ಟ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅದಕ್ಕೆ ಬೇಕಾದ ದಾರಿಯನ್ನು ತೆರೆಯುವ ಸೇವಕರು ಮಾತ್ರವಾಗಿರುತ್ತಾರೆ. ಕೂಲಿ ನೀಡುವ ಜನರೊಡನೆ ಕೃತಜ್ಞರಾಗುವುದು ಅವರ ಹೊಣೆಯಾಗಿದೆ. ಯಾರನ್ನು ಬೇಕಾದರೂ ಕಾನೂನು ಸಭೆಗೆ ಕಳುಹಿಸಲು ಮತ್ತು ಅವರನ್ನು ಮರಳಿ ಕರೆಸಲು ಜನರಿಗೆ ಅಧಿಕಾರವಿದೆ. ಜನರೇ ಪ್ರಧಾನವಾಗಿರುವ ಗಣರಾಜ್ಯದಲ್ಲಿ ಸಂತೋಷ ಪಡೆಯಬೇಕಾದುದು ಜನರಾಗಿದ್ದಾರೆ. ಪೊಲೀಸರಾಗಲೀ, ಸೈನಿಕರಾಗಲೀ, ಮಂತ್ರಿಗಳಾಗಲೀ, ಬಂಡವಾಳಶಾಹಿಗಳಾಗಲೀ ಅಲ್ಲ. ಹಬ್ಬದ ದಿನಗಳಲ್ಲಿ ಸೇರಬೇಕಾದವರು, ಪರೇಡ್ ನಡೆಸಬೇಕಾದವರು ವಾಸ್ತವದಲ್ಲಿ ರೈತರು, ನಾಡಿನ ಪ್ರತಿಭಾವಂತರು ಮತ್ತು ಇತರರಾಗಿರುತ್ತಾರೆ. ಗದ್ದೆಯಲ್ಲಿ ಮೈ ಮುರಿದು ಕೆಲಸ ಮಾಡುವವರ, ಬೀದಿಗಳಲ್ಲಿ ಬೆಂದು ಬೆವರಾಗುವವರ, ಮನೆಗಳಲ್ಲಿ ಉರಿದು ಹೋಗುವವರ ಕೆಲಸದ ಉಪಕರಣಗಳು ಮತ್ತು ಪ್ರಾಯೋಗಿಕ ಜೀವನದ ಸಾಮಗ್ರಿಗಳು ಅಲ್ಲಿ ಪ್ರದರ್ಶನವಾಗಬೇಕೇ ಹೊರತು ಶಸ್ತ್ರಾಸ್ತ್ರಗಳ, ಯುದ್ಧ ವಿಮಾನಗಳ ವಿಜೃಂಭಣೆಗಳಲ್ಲ. ಈ ಅರ್ಥದಲ್ಲಿ ಜನವಿರೋಧಿ ಕಾನೂನಿಗೆ ವಿರುದ್ಧವಾದ ಹೋರಾಟವು ರೈತರ ಪ್ರತಿಭಟನಾ ರ್ಯಾಲಿಯ ಮೂಲಕ ಜನಪರ ರಿಪಬ್ಲಿಕ್ ಪರೇಡ್‌ ಗೆ ಅವಕಾಶ ಒದಗಿಸಿತು ಎಂದೇ ಹೇಳಬಹುದು. ಜನರು ರಾಜಧಾನಿಯಲ್ಲಿ ಸೇರಿದಾಗಲೆ ಭಾರತ ವಾಸ್ತವದಲ್ಲಿ ರಿಪಬ್ಲಿಕ್ ಆಗಿರುವುದು. ಮೂಲಭೂತ ಜನವಿಭಾಗವನ್ನು ಹೊರಗಟ್ಟಿ, ಮುಳ್ಳು ಬೇಲಿಗಳು ಮತ್ತು ಆಯುಧಗಳ ಮೂಲಕ ಹುಜೂರ್ ಕಛೇರಿಗಳಿಗೆ ಕಾವಲು ನಿಲ್ಲುವ ಪುಂಡರೇ, ಜನರು ವಾಸ ಮಾಡುವ ಜಾಗವೇ ಪ್ರಜಾಪ್ರಭುತ್ವ ದೇಶದ ರಾಜಧಾನಿ ಎಂಬುದನ್ನು ನೀವು ಯಾವಾಗ ತಿಳಿದುಕೊಳ್ಳುತ್ತೀರಿ. ಆ ಮಟ್ಟದಲ್ಲಿ ಶಾಹೀನ್‌ ಭಾಗ್ ಮತ್ತು ಸಿಂಘು ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತ ಗಣರಾಜ್ಯದ ಸಂರಕ್ಷಣಾ ಕೇಂದ್ರವಾಗಿ ದಾಖಲಾಯಿತು.

ಕೃಷಿ ನಾಶವಾದರೆ ಏನಾಗಬಹುದು?

ರೈತರು ಎಲ್ಲಾ ಜನರ ಜೀವನಾಡಿಯಾಗಿರುತ್ತಾರೆ. ಅವರು ಬೆಳೆಯುವ ಧಾನ್ಯಗಳು ಜನರ ಪ್ರಾಣ ಉಳಿಸುವುದು. ಅವರು ನೆಟ್ಟು ಪರಿಪಾಲಿಸಿದ ಮರಗಿಡಗಳು ಜನರಿಗೆ ಪ್ರಾಣ ವಾಯುವನ್ನು ನೀಡುವುದು. ಪಕ್ಷಿಗಳು ಮತ್ತು ಜಾನುವಾರುಗಳ ಅಸ್ತಿತ್ವಕ್ಕೆ ದೊಡ್ಡ ಕೊಡುಗೆ ರೈತರಾಗಿರುತ್ತಾರೆ. ಮಣ್ಣಿನ ವಾಸನೆ ತಿಳಿದ ಮಾನವರನ್ನು ಪ್ರೀತಿಸುವ ರೈತರು ನಾಶವಾದರೆ ಯಾವುದೇ ರಾಷ್ಟ್ರ ಮತ್ತು ಅಲ್ಲಿನ ಜನತೆ ಸೂರ್ಯೋದಯವನ್ನು ಕಾಣಲಾರದು.

ಭಾರತ ರೈತರ ನಾಡು. ಕಾರ್ಮಿಕರು ಸೇರಿದಂತೆ ತಳಮಟ್ಟದ ಜನರ ನಾಡು. ಇಲ್ಲಿ ದೊಡ್ಡ ಸಂಸ್ಕೃತಿಯೊಂದು ರೂಪುಗೊಂಡಿರುವುದು ರೈತರ ಕಠಿಣ ಪರಿಶ್ರಮದಿಂದ ಮಾತ್ರ. ಜನರ ಜೀವನ, ರಾಷ್ಟ್ರದ ಆರ್ಥಿಕತೆ, ಪ್ರಭುತ್ವದ ಅಸ್ತಿತ್ವ, ವಿದೇಶಿ ವರಮಾನದ ಹೆಚ್ಚಳ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ ರೈತರ ದೊಡ್ಡ ಸಹಭಾಗಿತ್ವದಲ್ಲಿ ಲಭಿಸಿದೆ.

ಭಾರತ ಕೃಷಿ ವಲಯ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. 130 ಕೋಟಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ದುಡಿಮೆ ಕೃಷಿ ವಲಯಕ್ಕೆ ಸಂಬಂಧಿಸಿದ. ಮತ್ತೊಂದು ವರದಿ ಪ್ರಕಾರ ಶೇಕಡ 70ರಷ್ಟು ಜನರು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ದುಡಿಯುತ್ತಾರೆ. 2018ರ ಅಂಕಿಅಂಶ ಪ್ರಕಾರ ದೇಶದ ಜಿ.ಡಿ.ಪಿಯ ಶೇಕಡ 17-18ರಷ್ಟು ಕೊಡುಗೆ ರೈತರದ್ದಾಗಿದೆ. ಎಲ್ಲಾ ಅರ್ಥದಲ್ಲೂ ದೇಶವು ಕೃಷಿ ಮತ್ತು ರೈತಾಪಿ ಜನರನ್ನು ಜತನದಿಂದ ರಕ್ಷಿಸಿಕೊಳ್ಳಬೇಕಾಗಿದೆ. ಕಣ್ಣಿನ ಕೃಷ್ಣಮಣಿಯಂತೆ ಎಂಬ ಮಾತೇ ಇದೆಯಲ್ಲ, ಆ ರೀತಿಯಾಗಿ. ನಾವೇನಾದರೂ ಮಾಡುತ್ತಿದ್ದರೆ ಅದು ಈ ನೆಲದ ಮಣ್ಣನ್ನು ಮತ್ತು ಕೃಷಿಯನ್ನು ಯಾವ ರೀತಿ ಬಾಧಿಸುತ್ತದೆ ಎಂಬುದನ್ನು ಮೊತ್ತಮೊದಲು ಚಿಂತಿಸಬೇಕಾಗಿದೆ. ಆ ರೀತಿ ದೇಶದಲ್ಲಿ ಯಾವುದೇ ಕಾನೂನನ್ನು ತರುವಾಗಲೂ ಅದು ರೈತಾಪಿ ಜನರನ್ನು ಮತ್ತು ಉತ್ಪಾದನೆಯನ್ನು ಯಾವ ರೀತಿಯಲ್ಲಿ ಬಾಧಿಸುತ್ತದೆ ಎಂಬುದರ ಕುರಿತು ಚಿಂತಿಸಬೇಕು. ರೈತರನ್ನು ಮತ್ತು ಬೇಸಾಯ ಭೂಮಿಯನ್ನು ಸಂರಕ್ಷಿಸುವುದು ಯಾವುದೇ ಜನತೆಯ ಮತ್ತು ಆಳುವ ವರ್ಗದ ಪ್ರಪ್ರಥಮ ಮತ್ತು ಪ್ರಮುಖ ಬಾಧ್ಯತೆಯಾಗಿದೆ.

ಆದರೆ ಈ ದೇಶದ ಆಳುವ ವರ್ಗವು ವಿಶೇಷತಃ ಇತ್ತೀಚೆಗೆ ರೈತರಿಗೆ ಏನನ್ನು ನೀಡಿದೆ? ಜಮೀನ್ದಾರಿ ಪದ್ಧತಿಯಲ್ಲೂ, ಬ್ರಿಟಿಷ್ ಆಳ್ವಿಕೆಯಲ್ಲೂ ರೈತರು ತೀವ್ರ ಸ್ವರೂಪದ ಶೋಷಣೆಗೆ ಒಳಗಾದರು. ಸ್ವಾತಂತ್ರ್ಯೋತ್ತರ ಇಂಡಿಯಾದಲ್ಲಿ ಜಾರಿಗೊಳಿಸಿದ ಕೆಲವು ಕಾನೂನುಗಳು, ನೀತಿನಿಲುವುಗಳು ರೈತಾಪಿ ಜನರಿಗೆ ಧನಾತ್ಮಕವಾಗಿತ್ತು. ಕೆಲವು ಕಾನೂನುಗಳು ಆಳುವ ವರ್ಗದ ಕ್ರಮಗಳು ರೈತರಿಗೆ ಪ್ರತಿಕೂಲವಾಗಿ ಬಾಧಿಸಿತು. ವಿಶೇಷತಃ 1990ರ ದಶಕಗಳಲ್ಲಿ ಜಾಗತೀಕರಣದ ನೀತಿಗಳು. ಕೆಲವು ಆರ್ಥಿಕ ನೀತಿಗಳು, ಬೇಸಾಯ ಭೂಮಿಗೆ ಸಂಬಂಧಿಸಿದ ಕಾನೂನು ಪರಿಷ್ಕರಣೆಗಳು, ಬ್ಯಾಂಕಿಂಗ್ ಕ್ಷೇತ್ರ, ಮಾರುಕಟ್ಟೆ ಕಾಯ್ದೆಗಳು ಮೊದಲಾದವುಗಳು ಬೇಸಾಯ ಕ್ಷೇತ್ರವನ್ನು ನಾಶಪಡಿಸುವಂತದ್ದಾಗಿತ್ತು. ಇಂಡಿಯಾದಲ್ಲಿ ಬದಲಾಗಿ ಬಂದ ಸರಕಾರಗಳು ಮಾಡಿದ ಬೇಸಾಯ ವಿರೋಧಿ ಕ್ರಮಗಳನ್ನು ತಿಳಿದುಕೊಳ್ಳಲು, ದೇಶದ ರೈತರ ಆತ್ಮಹತ್ಯೆಯ ಲೆಕ್ಕವನ್ನು ಪರಿಶೀಲಿಸಿದರೆ ಸಾಕು.

2017-18ರ ಅಂಕಿಅಂಶಗಳ ಪ್ರಕಾರ, ಇಂಡಿಯಾದ ರೈತರ ಆತ್ಮಹತ್ಯೆಯ ಸರಾಸರಿ ಅನುಪಾತ ದಿನವೊಂದರಲ್ಲಿ ಹತ್ತರಂತೆ ಇದೆ. 1995-2020ರ ವರೆಗೆ ಇಂಡಿಯಾದಲ್ಲಿ ಆತ್ಮಹತ್ಯೆ ಮಾಡಿದ ರೈತರ ಸಂಖ್ಯೆ 4 ಲಕ್ಷ! 1995ರಲ್ಲಿ ಕೇವಲ ಮಹಾರಾಷ್ಟ್ರವೊಂದರಲ್ಲೇ 60,750ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ 12,602 ರೈತರು ಆತ್ಮಹತ್ಯೆ ಮಾಡಿಕೊಂಡರೆ, 2015ರಿಂದ ಆತ್ಮಹತ್ಯೆ ಮಾಡಿಕೊಂಡವರ ಲೆಕ್ಕವನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಬಹಿರಂಗಪಡಿಸಲಿಲ್ಲ. 2019ರಲ್ಲಿ ಪ್ರಕಾಶನಗೊಳಿಸಿದ ಅಂಕಿಅಂಶಗಳ ಪ್ರಕಾರ, 2016ರಲ್ಲಿ 12,360, 2018ರಲ್ಲಿ 11,370 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರದ ಕೃಷಿ ಇಲಾಖೆಯ ಸಲಹೆಗಾರರಾಗಿದ್ದ ಪಿ.ಸಿ ಬೋಧ್ ರಚಿಸಿದ “Farmers’ Suicides in India: A Policy Malignancy’ ಎಂಬ ಕೃತಿಯಲ್ಲಿ ಇದರ ವಿವರಣೆಯನ್ನು ನೀಡುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು ಇಂಡಿಯಾದಲ್ಲಿ ರೈತರು ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಳ್ಳುವ ಮತ್ತು ಪರಿಹರಿಸುವುದರಲ್ಲಿ ಸೋತು ಹೋದೆವೆಂದು ಬೋಧ್ ಈ ಕತಿಯಲ್ಲಿ ವಿಮರ್ಶಿಸುತ್ತಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಂದಿನಿಂದ ರೈತರ ಸಮಸ್ಯೆಗಳು ರೂಕ್ಷವಾಗಿ ಮುಂದುವರಿಯುತ್ತಿದೆ. ಮೋದಿಯ ಆಡಳಿತದ ಕೆಳಗೆ ಇಂಡಿಯಾದಲ್ಲಿ ಬೇಸಾಯ ಕ್ಷೇತ್ರ ಒಂದಿನಿತು ಬೆಳವಣಿಗೆಯನ್ನು ಕಂಡಿಲ್ಲ. ಬೇಸಾಯ ಕ್ಷೇತ್ರದ ಬೆಳವಣಿಗೆಯು ಧುತ್ತನೆ ಪ್ರಪಾತಕ್ಕೆ ಜಾರಿತು. ಮೋದಿ ಸರಕಾರವು ಕಾರ್ಪೊರೇಟ್‌ ಗಳನ್ನು ತುಷ್ಟೀಕರಣಗೊಳಿಸುವ ಕೃಷಿ ಕಾಯ್ದೆಗಳನ್ನು ತಂದಿತು. ಬೆಲೆ ವಿಮೆ, ಕೃಷಿ ಸಾಲಗಳು, ರಿಲಯನ್ಸ್ ಮತ್ತು ಶ್ರೀಮಂತ ಕೃಷಿಕರಿಗೆ ಆರ್ಥಿಕವಾಗಿ ಪ್ರಯೋಜನವಾಯಿತು. ಕೃಷಿ ಭೂಮಿಯನ್ನು ಬೃಹತ್ ಪ್ರಮಾಣದಲ್ಲಿ ಕಾರ್ಪೊರೇಟ್‌ ಗಳಿಗೆ ಹಸ್ತಾಂತರಿಸುವ ಕ್ರಮಗಳು ಯಥಾ ರೀತಿಯಲ್ಲಿ ನಡೆದವು. ಇದರ ಮುಂದುವರಿದ ಭಾಗವೆಂಬಂತೆ ಕೃಷಿ ನೀತಿಗಳಲ್ಲಿ ತಿದ್ದುಪಡಿಗಳನ್ನು ತರಲಾಯಿತೆಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಮೂರು ನೂತನ ಕಾಯ್ದೆಗಳನ್ನು ಬಿಜೆಪಿ ಸರಕಾರ ಪಾಸು ಮಾಡಿತು; Farmers (Empowerment and Protection) Agreement on Price Assurance and Farm Services Act, 2020, Farmers’ Produce Trade and Commerce (Promotion and Facilitation) Act, 2020, Essential Commodities (Amendment) Act, 2020 ಮೊದಲಾದವುಗಳು ಹಳೆಯ ಎಪಿಎಂಸಿ ಕಾಯ್ದೆಯಲ್ಲಿ ಪ್ರಮುಖವಾದ ತಿದ್ದುಪಡಿಗಳನ್ನು ಈ ಮೂಲಕ ತರಲಾಯಿತು. ರೈತರನ್ನು ಗುಲಾಮರನ್ನಾಗಿಸುವ, ಆರ್ಥಿಕವಾಗಿ ಶೋಷಿಸುವ, ಕೃಷಿ ಭೂಮಿಯನ್ನು ನಾಶಪಡಿಸುವ ಮತ್ತು ಎಲ್ಲಾ ಪ್ರಜಾಸತ್ತೆಯ ಹಕ್ಕುಗಳನ್ನು ನಿರಾಕರಿಸುವ ರೀತಿಯಲ್ಲಿದೆ ನೂತನ ಕೃಷಿ ಕಾಯ್ದೆಗಳು. ಇವುಗಳನ್ನು ಜಾರಿಗೊಳಿಸಿದರೆ ಭಾರತೀಯ ಕೃಷಿ ಕ್ಷೇತ್ರವು ಒಟ್ಟಾಗಿ ದೈತ್ಯ ಕಂಪನಿಗಳ ಕಾಲ ಕೆಳಗೆ ಬಂದು ಬೀಳುವುದು. ಆಹಾರಕ್ಷಾಮ ಮತ್ತು ಬೆಲೆಯೇರಿಕೆಯು ಮಾರುಕಟ್ಟೆಯಲ್ಲಿ ತೀವ್ರ ಸ್ವರೂಪದ ತೊಂದರೆಗಳನ್ನು ಸಷ್ಟಿಸುವುದು. ಈ ಕಾನೂನುಗಳ ದೂರವ್ಯಾಪಿ ದುರಂತಗಳನ್ನು ತಿಳಿದುಕೊಂಡು ಲಕ್ಷಾಂತರ ರೈತರು ಬಿಜೆಪಿ ಸರಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಫ್ಯಾಶಿಸಂ ಹೆಚ್ಚು ದಿನ ಬಾಳದು

ದೇಶದ ಸ್ವಾತಂತ್ರ್ಯ ಹೋರಾಟವು ಒಂದು ಸಂಕೋಲೆಯಂತೆ ಘಟಿಸಿತ್ತು. ನಾಯಕರು ಒಟ್ಟಾಗಿ ಕುಳಿತು ಯೋಜನೆಯನ್ನು ರೂಪಿಸಿ, ಬ್ರಿಟಿಷರ ವಿರುದ್ಧ ರಂಗಕ್ಕಿಳಿಯಲು ಆಹ್ವಾನವನ್ನು ನೀಡಿ, ಒಂದು ನಿರ್ದಿಷ್ಟ ದಿನದಂದು ನಿರ್ಣಯಿಸಿದ ಕಾರ್ಯಕ್ರಮಗಳೊಂದಿಗೆ ಹೋರಾಟವನ್ನು ಆರಂಭಿಸಿ, ನಿಶ್ಚಿತ ದಿನಗಳಲ್ಲಿ ಸಮಾರೋಪಗೊಂಡ ಕಾರ್ಯಕ್ರಮವಾಗಿರಲಿಲ್ಲ ಸ್ವಾತಂತ್ರ್ಯ ಹೋರಾಟ. ಗುಲಾಮಗಿರಿ, ಜನದ್ರೋಹ ಮತ್ತು ಅಸಹನೀಯ ಸಂದರ್ಭಗಳಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಜ್ಞೆ ಉಳ್ಳವರು, ಹಲವು ಹಂತಗಳಲ್ಲಿ, ದೇಶದ ಹಲವು ಭಾಗಳಲ್ಲಿ ಎಚ್ಚೆತ್ತುಕೊಂಡು ರಂಗಕ್ಕಿಳಿದಿದ್ದರು. ದೇಶದ ಧಮನಿಗಳಿಗೆ ಸ್ವಾತಂತ್ರ್ಯ ವಾಂಛೆಯ ಆಸಕ್ತಿಯು ಮೆಲ್ಲಮೆಲ್ಲನೆ ಹರಿಯತೊಡಗಿತ್ತು. ಈ ರೀತಿ ಹಂತಹಂತವಾಗಿ ಬ್ರಿಟಿಷ್ ವಿರೋಧಿ ಹೋರಾಟವು ಮುಂದುವರಿದು ಗೆಲುವನ್ನು ಕಂಡುಕೊಂಡಿತು.

ದೇಶದ ಆತ್ಮದೊಳಗೆ ಒಂದು ಅಗ್ನಿ ಪರ್ವತ ಹೊಗೆಯಾಡುತ್ತಿದೆ. ಸಂಘಪರಿವಾರದ ಜಾತಿ ಫ್ಯಾಶಿಸಂಗೆ, ಕೋಮುವಾದಿ ಪಕ್ಷಪಾತಕ್ಕೆ, ಕಾರ್ಪೊರೇಟ್ ಪೂಜೆಗೆ ವಿರುದ್ಧವಾದ ಜನಾಕ್ರೋಶವಾಗಿದೆ ಇದು. ಪೌರತ್ವ ಹೋರಾಟದ ಭೀತಿಯಲ್ಲಿ ಅದರ ಒಂದು ಹಂತವು ಕಳೆದುಹೋಯಿತು. ತಾತ್ಕಾಲಿಕ ವಿರಾಮದೊಂದಿಗೆ ಮುಂದಿನ ಹೋರಾಟ ರಂಗಕ್ಕೆ ಶಕ್ತಿಯನ್ನು ಆವಾಹಿಸಿ, ಹೋರಾಟದ ತಯಾರಿಯೊಂದಿಗೆ ಅವರು ಕಾಯುತ್ತಿದ್ದಾರೆ. ಇತ್ತೀಚೆಗೆ ಪಾಕಗೊಳಿಸಿದ ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಆರಂಭಿಸಿದ ಹೋರಾಟವು, ಹೊತ್ತಿ ಉರಿಯಲಿಲ್ಲ. ಕಾರ್ಮಿಕರ ಮನದಾಳದಲ್ಲಿ ಅದರ ವಿರುದ್ಧ ರೋಷವು ತಣಿದಿಲ್ಲ. ರೈತ ವಿರೋಧಿ ಕಾನೂನಿನ ವಿರುದ್ಧ ದೇಶದ ರಾಜಧಾನಿಯಲ್ಲಿ ಕಂಪನವನ್ನು ಸೃಷ್ಟಿಸಿ ಹೋರಾಟ ಮುಂದುವರಿಯುತ್ತಿದೆ. ಟ್ರ್ಯಾಕ್ಟರ್ ಟೈರುಗಳ ನೇರ ಗುರಿಯಾಗಿಸಿ ಪೊಲೀಸರು ರಸ್ತೆಗಳಲ್ಲಿ ಮೊಳೆಗಳನ್ನು ನೆಟ್ಟಾಗ, ರಬ್ಬರ್ ಟೈರುಗಳನ್ನು ಕೀಳಿ, ಗದ್ದೆಯನ್ನು ಅಗೆಯುವ ಉಕ್ಕಿನ ಚಕ್ರಗಳನ್ನು ಸಿಲುಕಿಸಿ ರೈತರು ಜವಾಬು ನೀಡಿದರು. ಜನವಿರೋಧಿ ಸರಕಾರವನ್ನು ಹೆಡೆಮುರಿ ಕಟ್ಟಿ ಒಗೆದು ಬಿಡುವ ಪ್ರತೀಕವೆಂಬಂತೆ ಇದನ್ನು ಗ್ರಹಿಸಿಕೊಳ್ಳಬಹುದು. ಹೋರಾಟವು ಗೆಲುವನ್ನು ಪಡೆದು ಕೊನೆಗೊಂಡರೂ ಆಳುವ ವರ್ಗದ ಭಯೋತ್ಪಾದನೆಯು ಅದನ್ನು ನಂದಿಸಿದರೂ ಅದು ಬಿಜೆಪಿ ಸರಕಾರದ ಬೇರುಗಳನ್ನು ಕೀಳುವುದು ಖಂಡಿತ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ಮತ್ತು ಆರ್ಥಿಕ ಬಿಕ್ಕಟ್ಟು ಜನಕಲ್ಯಾಣ ಕಾರ್ಯಕ್ರಮಗಳ ಗ್ರಾಫ್ ಕೆಳಹಂತಕ್ಕೆ ಸರಿದದ್ದು, ಜನರ ಮಧ್ಯೆ ಎದ್ದ ಅಸಮಾಧಾನವು ಯಾವುದೇ ವೇಳೆಯಲ್ಲೂ ಹೊತ್ತಿ ಉರಿಯಬಹುದು. ‘ಮುಸ್ಲಿಮ್ ದ್ವೇಷಿ ಸುಳ್ಳು ಪ್ರಚಾರ’ಗಳ ಮೂಲಕ ಇವೆಲ್ಲವನ್ನು ಎಷ್ಟು ದಿನಗಳ ವರೆಗೆ ಎದುರಿಸಿ ನಿಲ್ಲಲು ಸಂಘಪರಿವಾರಕ್ಕೆ ಸಾಧ್ಯವಾಗಬಹುದು! ಇವೆಲ್ಲವೂ ಸೇರಿಕೊಂಡ ರೋಷಾಗ್ನಿಯ ಸಣ್ಣ ಕಿಡಿಗಳು, ಸಂಘಪರಿವಾರದ ವಿರುದ್ಧ ಅಗ್ನಿಪರ್ವತವಾಗಿ ಸ್ಫೋಟಗೊಳ್ಳುವ ನಾಳೆಯ ದಿನಗಳನ್ನು ಪ್ರಜಾಪ್ರಭುತ್ವ ಇಂಡಿಯಾದ ನೈಜ ಸ್ವಾತಂತ್ರ್ಯ ದಿನವಾಗಿ ಮತ್ತು ರಿಪಬ್ಲಿಕ್ ಡೇ ಆಗಿ ಆಚರಿಸೋಣ.



Join Whatsapp