ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕರೆ ನೀಡಿರುವ ಟ್ರ್ಯಾಕ್ಟರ್ ಪರೇಡ್ ಗೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ಬೃಹತ್ ಜಾಥಾ ನಡೆಸಲು ರೈತರು ಸಿದ್ಧತೆ ನಡೆಸಿದ್ದಾರೆ.
ಸಂಯುಕ್ತ ಹೋರಾಟ ಸಮಿತಿ, ಕರ್ನಾಟಕ ವೇದಿಕೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ಅನೇಕ ಸಂಘಟನೆಗಳು ದೆಹಲಿ ರೈತ ಹೋರಾಟಕ್ಕೆ ಬೆಂಬಲ ಘೋಷಿಸಿದ್ದು, ಜ.26ರಂದು ಬೆಂಗಳೂರಿನಲ್ಲೂ ಬೃಹತ್ ಟ್ರ್ಯಾಕ್ಟರ್ ಪರೇಡ್ ಮತ್ತು ರೈತ ಸಮಾವೇಶ ನಡೆಯಲಿದೆ. “ಸಂಯುಕ್ತ ಹೋರಾಟ – ಕರ್ನಾಟಕ ವೇದಿಕೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳಿಂದ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಲಿದ್ದಾರೆ ಎಂದು ರೈತ ಸಂಘದ ಹಿರಿಯ ನಾಯಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ನಗರದ ಎಲ್ಲ ದಿಕ್ಕುಗಳಿಂದ ಬರುವ ವಾಹನಗಳು 11 ಗಂಟೆಗೆ ಬೆಂಗಳೂರು ನಗರದ ಹೊರ ವಲಯದಲ್ಲಿ ಜಮಾವಣೆಗೊಳ್ಳಲಿದ್ದು, 12 ಗಂಟೆಗೆ ನಗರ ಪ್ರವೇಶಿಸುತ್ತವೆ. ಅಂದು ಬೆಳಗ್ಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಗಳು ಧ್ವಜಾರೋಹಣ ನೆರವೇರಿಸಿ, ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು ಎಂದು ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದರು.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುವ ಮಾದರಿಯಲ್ಲಿಯೇ ಜ.26ರಂದು ಬೆಂಗಳೂರಿನಲ್ಲೂ ಬೃಹತ್ `ಟ್ರ್ಯಾಕ್ಟರ್ ಪರೇಡ್’ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಗಣರಾಜ್ಯೋತ್ಸವ ದಿನದ ಧ್ವಜಾರೋಹಣ ನೆರವೇರಿಸಿ, ನಾಡಿಗೆ ಸಂದೇಶ ನೀಡಿದ ನಂತರ, ನೈಸ್ ರಸ್ತೆ ಜಂಕ್ಷನ್ನಿಂಣದ ಫ್ರೀಡಂ ಪಾರ್ಕ್ ಮೈದಾನದವರೆಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದ್ದು, 10 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.
ನೈಸ್ ಜಂಕ್ಷನ್ನಿಂ ದ ಹೊರಡುವ ಪರೇಡ್ ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ವೃತ್ತದಿಂದ ಮಲ್ಲೇಶ್ವರಂ, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್, ಆನಂದರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಿ ಅಲ್ಲಿ ಪರೇಡ್ ಮುಕ್ತಾಯಗೊಳ್ಳಲಿದೆ.
ರೈತರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಡಿಹಳ್ಳಿ ತಿಳಿಸಿದರು
ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್ ಗಳು ಬೆಂಗಳೂರಿನತ್ತ ಹೊರಟಿವೆ. ಆದರೆ ಪೊಲೀಸರು ರೈತರ ಟ್ರ್ಯಾಕ್ಟರ್ ಗಳನ್ನು ತಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಪೊಲೀಸರು ಗೌರವಯುತವಾಗಿ ಟ್ರ್ಯಾಕ್ಟರ್ ಗಳು ಬೆಂಗಳೂರಿಗೆ ಬರಲು ಅನುಮತಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಕೋಡಿಹಳ್ಳಿ ಚಂದ್ರ ಶೇಖರ್ ಎಚ್ಚರಿಸಿದ್ದಾರೆ.
ರೈತರ ಹೋರಾಟಕ್ಕೆ ಬೆಂಬಲ: ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರ್ಯಾಕ್ಟರ್ ಪರೇಡ್
Prasthutha|